ದೆಹಲಿಯಲ್ಲಿ 'ಪವರ್' ಕಚ್ಚಾಟ: ರಾಜಕೀಯ ಪಕ್ಷಗಳ ಕೆಸರೆರಚಾಟ
ದೆಹಲಿಯಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಇದೀಗ..
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಇದೀಗ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ವಿದ್ಯುತ್ ಅಭಾವ ತಾರಕಕ್ಕೇರಿದ್ದು, ರಾಜಧಾನಿ ದೆಹಲಿ ಅಂಧಕಾರದಲ್ಲಿ ಮುಳುಗಿದೆ. ಇತ್ತ ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸುವ ಕುರಿತು ಆಶ್ವಾಸನೆಗಳನ್ನು ನೀಡುತ್ತಿದೆಯಾದರೂ, ಅದು ಕೂಡ ಈ ಹಿಂದಿನ ಸರ್ಕಾರಗಳಂತೆ ಸಮಸ್ಯೆ ಹೊಣೆಗಾರಿಕೆಯನ್ನು ಹಿಂದಿನ ಸರ್ಕಾರಗಳ ತಲೆ ಮೇಲೆ ಹೊರಿಸುತ್ತಿದೆ. ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಅವರು, 15 ದಿನದಲ್ಲಿ ಸಮಸ್ಯೆ ಪರಿಹಾರ ಮಾಡುವುದಾಗಿ ಹೇಳಿದರಾದರೂ, ಈ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ಚುಚ್ಚಲು ಮರೆಯಲಿಲ್ಲ.
'ಕಳೆದ 12 ವರ್ಷಗಳಿಂದ ದೆಹಲಿಯಲ್ಲಿ ವಿದ್ಯುತ್ ಅಭಾವವಿದೆ. ಆದರೆ 15 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಪ್ರಸ್ತುತ ಉದ್ಭವಿಸಿರುವ ಈ ಸಮಸ್ಯೆಗೆ ಕಾಂಗ್ರೆಸ್ ಪಕ್ಷದ ನಿರ್ಧಾರದ ಕೊರತೆ, ನಿರ್ವಹಣೆಯ ಕೊರತೆಯೇ ಕಾರಣ ಎಂದು ಆರೋಪಿಸಿದ್ದಾರೆ.
ಅಲ್ಲದೆ 49 ದಿನಗಳ ಅಲ್ಪಾವಧಿ ಸರ್ಕಾರ ನಡೆಸಿದ್ದ ಆಮ್ ಆದ್ಮಿ ಪಕ್ಷವನ್ನು ಕೂಡ ಬಿಡದ ಪಿಯೂಶ್ ಗೋಯಲ್ ಅವರು, ಅರವಿಂದ್ ಕೇಜ್ರಿವಾಲ್ ಅವರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇತ್ತ ಕೇಂದ್ರ ಸಚಿವ ಪಿಯೂಶ್ ಗೋಯಲ್ ಸುದ್ದಿಗೋಷ್ಠಿ ನಡೆಸುತ್ತಿದ್ದರೆ, ಅತ್ತ ದೆಹಲಿಯ ಮಾಜಿ ಸಚಿವ ಮತ್ತು ಆಪ್ ಪಕ್ಷದ ಮುಖಂಡ ಮನೀಶ್ ಸಿಸೋಡಿಯಾ ಅವರು ದೆಹಲಿಯಲ್ಲಿರುವ ಕೇಂದ್ರ ಸಚಿವ ಹರ್ಷವರ್ಧನ್ ಅವರ ನಿವಾಸದ ಎದುರು ಧರಣಿ ನಡೆಸಿದ್ದಾರೆ. ವಿದ್ಯುತ್ ಸಮಸ್ಯೆಯನ್ನು ಬಗಹೆರಿಸುವಂತೆ ಘೋಷಣೆಗಳನ್ನು ಕೂಗಿದ್ದಾರೆ.
'ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ದೆಹಲಿ ಬಿಜೆಪಿ ಘಟಕದ ಅಧ್ಯಕ್ಷರಾಗಿರುವ ಹರ್ಷವರ್ಧನ್ ಅವರು ಇದೀಗ ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ದೆಹಲಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವುದು ಅವರ ಜವಾಬ್ದಾರಿ' ಎಂದು ಹೇಳಿದ್ದಾರೆ.
ಒಟ್ಟಾರೆ ದೆಹಲಿ ವಿದ್ಯುತ್ ಸಮಸ್ಯೆ ಇದೀಗ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ನಾಂದಿಯಾಗಿದ್ದು, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಬದಲು ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ಇತರೆ ಪಕ್ಷಗಳತ್ತ ಕೈತೋರಿಸುತ್ತಿವೆ. ರಾತ್ರಿ 10ರ ಬಳಿಕ ವಿದ್ಯುತ್ ಇಲ್ಲದೆ ದೆಹಲಿಯ ರಸ್ತೆ ಬಿಕೋ ಎನ್ನುತ್ತಿದ್ದು, ಕತ್ತಲೆಯಿಂದಾಗಿ ಮಹಿಳೆಯರು ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಇತ್ತ ನಿರ್ಭಯ ಪ್ರಕರಣಗಳನ್ನು ಉದಾಹರಿಸುತ್ತಿರುವ ದೆಹಲಿಯ ಮಾಲ್ಗಳು ವಿದ್ಯುತ್ ಅಭಾವದಿಂದಾಗಿ ಮತ್ತೆ ಅಂತಹುದೇ ಪ್ರಕರಣ ಪುನರಾವರ್ತನೆಯಾಗಬಹುದು ಎಂದು ತಮ್ಮ ಆತಂಕ ವ್ಯಕ್ತಪಡಿಸುತ್ತಿವೆ.
ಮತ್ತೊಂದೆಡೆ 45 ಡಿಗ್ರಿ ಉಷ್ಣಾಂಶದಲ್ಲಿ ಬೇಯುತ್ತಿರುವ ದೆಹಲಿ ಜನತೆ ವಿದ್ಯುತ್ ನೀಡದ ದೆಹಲಿ ಸರ್ಕಾರ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.