ಇರಾಕ್‌ನ ಅತಿ ದೊಡ್ಡ ತೈಲಾಗಾರದ ಮೇಲೆ ಉಗ್ರರ ದಾಳಿ
ಇರಾಕ್‌ನ ಅತಿ ದೊಡ್ಡ ತೈಲಾಗಾರವೆಂದು ಖ್ಯಾತಿ..
ಬಾಗ್ದಾದ್: ಇರಾಕ್‌ನಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಇರಾಕ್‌ನ ಅತಿ ದೊಡ್ಡ ತೈಲಾಗಾರವೆಂದು ಖ್ಯಾತಿ ಪಡೆದಿರುವ ಬೈಜಿ ತೈಲ ಘಟಕದ ಮೇಲೆ ಬಂಡುಕೋರರು ದಾಳಿ ನಡೆಸಿದ್ದಾರೆ.
ಇಂದು ಬೆಳಗ್ಗೆ 4 ಗಂಟೆಯ ಸುಮಾರಿನಲ್ಲಿ ಉತ್ತರ ಬಾಗ್ದಾದ್‌ನ ಸಲೇಹಿದ್ದೀನ್ ಪ್ರಾಂತ್ಯದಲ್ಲಿರುವ ಬೈಜಿ ತೈಲಗಾರದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಸುಮಾರು 100ರಿಂದ 150 ಉಗ್ರರ ಗುಂಪು ಬೈಜಿ ತೈಲಾಗಾರಕ್ಕೆ ನುಗ್ಗಿದ್ದು, ಭದ್ರತಾ ಸಿಬ್ಬಂದಿಗಳ ಮೇಲೆ ಮನಸೋ ಇಚ್ಛೆ ಗುಂಡಿನ ಮಳೆಗರೆದಿದ್ದಾರೆ. ಉಗ್ರರ ದಾಳಿಗೆ ಭದ್ರತಾ ಸಿಬ್ಬಂಧಿಗಳು ಕೂಡ ಪ್ರತಿ ದಾಳಿ ನಡೆಸುತ್ತಿದ್ದು, ದಾಳಿಯಲ್ಲಿನ ಸಾವುನೋವಿನ ಕುರಿತು ವರದಿಯಾಗಿಲ್ಲ.
ಮೂಲಗಳ ಪ್ರಕಾರ ಗುಂಡಿನ ದಾಳಿಯಿಂದಾಗಿ ತೈಲಗಾರದ ಕೆಲ ಭಾಗಗಳಿಗೆ ಬೆಂಕಿ ತಗುಲಿದ್ದು, ತೈಲಗಾರವನ್ನು ಉಗ್ರರಿಂದ ರಕ್ಷಿಸುವಂತೆ ಇರಾಕ್ ಸರ್ಕಾರ ಮಿಲಿಟರಿ ಪಡೆಗಳಿಗೆ ಆದೇಶಿಸಿದೆ. ಇರಾಕ್‌ನಲ್ಲಿ ಬಂಡುಕೋರರ ದಾಳಿ ಆರಂಭವಾಗುತ್ತಿದ್ದಂತೆಯೇ ದೇಶದಲ್ಲಿನ ಎಲ್ಲ ತೈಲಾಗಾರಗಳ ಭದ್ರತೆ ಹೆಚ್ಚಿಸಲಾಗಿದ್ದು, ಸೈನಿಕರು ತೈಲಾಗಾರಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಬೈಜಿ ತೈಲಗಾರವನ್ನು ಸ್ಥಗಿತಗೊಳಿಸಲಾಗಿದ್ದು, ಎಲ್ಲ ಕಾರ್ಮಿಕರನ್ನು ತೈಲಗಾರದಿಂದ ಹೊರಗೆ ಸ್ಥಳಾಂತರಿಸಲಾಗಿದೆ. ತೈಲೋತ್ಪಾದನೆ ಇರಾಕ್‌ನ ಪ್ರಮುಖ ಆದಾಯ ಮೂಲವಾಗಿದ್ದು, ಇರಾಕ್‌ನಿಂದ ಅಂತಾರಾಷ್ಟ್ರೀಯ ತೈಲು ಮಾರುಕಟ್ಟೆಗೆ ಪ್ರತಿನಿತ್ಯ ಸುಮಾರು 2.5 ಮಿಲಿಯನ್ ಬ್ಯಾರೆಲ್ ತೈಲ ರಫ್ತಾಗುತ್ತಿತ್ತು. ಪ್ರಸ್ತುತ ಉಗ್ರರ ದಾಳಿಯಿಂದಾಗಿ ತೈಲೋತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದ್ದು, ಅಂತಾರಾಷ್ಟ್ರೀಯ ಸಮುದಾಯವು ಇರಾಕ್‌ನಲ್ಲಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
275 ಅಂಕಗಳನ್ನು ಕಳೆದುಕೊಂಡ ಸೆನ್ಸೆಕ್ಸ್
ಇದೇ ವೇಳೆ ಇರಾಕ್ ಬಿಕ್ಕಟ್ಟು ಭಾರತೀಯ ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಭಾರತೀಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಧ್ಯಾಹ್ನದ ವಹಿವಾಟಿನ ಹೊತ್ತಿಗೆ 275 ಅಂಕಗಳನ್ನು ಕಳೆದುಕೊಂಡಿದೆ. ಇರಾಕ್ನಿಂದ ಭಾರತಕ್ಕೆ ರವಾನೆಯಾಗುತ್ತಿದ್ದ ತೈಲ ಪ್ರಮಾಣದಲ್ಲಿಯೂ ಕುಸಿತ ಕಂಡುಬಂದಿದ್ದು, ಭಾರತಕ್ಕೆ ರವಾನೆಯಾಗುತ್ತಿದ್ದ ತೈಲ ಪ್ರಮಾಣದಲ್ಲಿ ಶೇ.20 ರಷ್ಟು ಕಡಿತಗೊಂಡಿದೆ. ಈ ಹಿಂದೆ ಇರಾಕ್ನಿಂದ ಭಾರತಕ್ಕೆ ಪ್ರತಿನಿತ್ಯ 4 ಮಿಲಿಯನ್ ಬ್ಯಾರೆಲ್ ತೈಲ ರಫ್ತಾಗುತ್ತಿತ್ತು. ರುಪಾಯಿ ಮೌಲ್ಯ ಕೂಡ ಅಲ್ಪ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ನಿನ್ನೆ 60ರು.ಗಳ ಗಡಿಯಲ್ಲಿದ್ದ ಡಾಲರ್ ಮೌಲ್ಯ ಇದೀಗ 60.42 ರು.ಗಳಿಗೇರಿದೆ.
ಪ್ರಮುಖ ಷೇರು ಸಂಸ್ಥೆಗಳಾದ ಜಿಂದಾಲ್ ಉಕ್ಕು ಮತ್ತು ಇಂಧನ ಸಂಸ್ಥೆ, ಬಿಪಿಸಿಎಲ್ ಮತ್ತು ಬಿಪಿಸಿಎಲ್ ಸಂಸ್ಥೆಗಳು ತಮ್ಮ ಷೇರು ಮೌಲ್ಯದಲ್ಲಿ ಶೇ.3ರಷ್ಟು ನಷ್ಟವನ್ನು ದಾಖಲಿಸಿವೆ.
ಭಾರತೀಯ ಮಾರುಕಟ್ಟೆ ಮೇಲೆ ಪರಿಣಾಮ ಇಲ್ಲ: ರಘುರಾಂ ರಾಜನ್
ಇರಾಕ್‌ನ ಆಂತರಿಕ ಬೆಳವಣಿಗೆ ಕುರಿತಂತೆ ಮಾತನಾಡಿರುವ ಆರ್‌ಬಿಐ ಗವರ್ನರ್ ರಘುರಾಂ ರಾಜನ್ ಅವರು, ಇರಾಕ್ ಬೆಳವಣಿಗೆಯಿಂದ ಭಾರತೀಯ ತೈಲ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಇರಾಕ್‌ನ ಬಹುತೇಕ ತೈಲ ನಿಕ್ಷೇಪಗಳು ದಕ್ಷಿಣ ಭಾಗದಲ್ಲಿದ್ದು, ಪ್ರಸ್ತುತ ಉತ್ತರ ಇರಾಕ್‌ನಲ್ಲಿ ಬಿಕ್ಕಟ್ಟು ಉದ್ಭವಿಸಿದೆ. ಹೀಗಾಗಿ ಇದು ಭಾರತೀಯ ತೈಲ ಉಧ್ಯಮದ ಮೇಲೆ ನೇರ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ಇರಾಕ್ ಬಿಕ್ಕಟ್ಟಿನಿಂದ ಸಮಸ್ಯೆ ಉದ್ಭವಿಸಿದರೆ ಅದನ್ನು ಎದುರಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದರು.