ಜಾಮೀನಿಗೆ ಯಶವಂತ್ ಸಿನ್ಹಾ ಸಮ್ಮತಿ; ಜೈಲಿನಿಂದ ಶೀಘ್ರ ಬಿಡುಗಡೆ
ಪ್ರತಿಭಟನೆಯಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸುತ್ತಿದ್ದ ಬಿಜೆಪಿಯ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಅವರು ಕೊನೆಗೂ ಜಾಮೀನು ಪಡೆಯಲು ಒಪ್ಪಿಗೆ ಸೂಚಿಸಿದ್ದು...
ನವದೆಹಲಿ: ಪ್ರತಿಭಟನೆಯಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸುತ್ತಿದ್ದ ಬಿಜೆಪಿಯ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಅವರು ಕೊನೆಗೂ ಜಾಮೀನು ಪಡೆಯಲು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಜಾಮೀನು ತಿರಸ್ಕರಿಸಿ ಕಳೆದ 15ದಿನಗಳಿಂದ ಜೈಲುವಾಸದಲ್ಲಿದ್ದ ಯಶವಂತ್ ಸಿನ್ಹಾ ಅವರು, ಅಡ್ವಾಣಿ ಅವರ ಸಲಹೆಯಂತೆ ಜಾಮೀನು ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಜಾರ್ಖಂಡ್ನಲ್ಲಿ ಉದ್ಭವಿಸಿದ್ದ ವಿದ್ಯುತ್ ಬಿಕ್ಕಟ್ಟನ್ನು ವಿರೋಧಿಸಿ ಕಳೆದ ಜೂನ್ 2ರಂದು ಪ್ರತಿಭಟನೆ ನಡೆಸುತ್ತಿದ್ದ ಯಶ್ವಂತ್ ಸಿನ್ಹಾ ಅವರನ್ನು ಜೂನ್ 3ರಂದು ಪೊಲೀಸರು ಬಂಧಿಸಿದ್ದರು. ಪ್ರತಿಭಟನೆ ವೇಳೆ ವಿದ್ಯುತ್ ಮಂಡಳಿಯ ಪ್ರಧಾನ ವ್ಯವಸ್ಥಾಪಕ ದನೇಶ್ ಝಾ ಅವರ ಕೈಗಳನ್ನು ಕಟ್ಟಿಹಾಕುವಂತೆ ಸಿನ್ಹಾ ಕಾರ್ಯಕರ್ತರಿಗೆ ಸೂಚಿಸಿದ್ದರು. ಸಿನ್ಹಾ ಆದೇಶದಂತೆ ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಝಾ ಅವರ ಕೈಗಳನ್ನು ಕಟ್ಟಿಹಾಕಿದ್ದರು.
ಯಶವಂತ್ ಸಿನ್ಹಾ ಮತ್ತು ಬಿಜೆಪಿ ಕಾರ್ಯಕರ್ತರು ತಮಗೆ ಅವಮಾನ ಮತ್ತು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ದನೇಶ್ ಝಾ ಅವರು ಹಜಾರಿಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸಿನ್ಹಾರನ್ನು ಬಂಧಿಸಿದ್ದ ಪೊಲೀಸರು ಅವರನ್ನು ನ್ಯಾಯಲಯದ ಮುಂದೆ ವಿಚಾರಣೆಗೆ ಹಾಜರುಪಡಿಸಿದಾಗ ಜಾಮೀನು ಪಡೆಯುವಂತೆ ನ್ಯಾಯಾಲಯ ಸಲಹೆ ನೀಡಿತ್ತು. ಆದರೆ ಜಾಮೀನು ತಿರಸ್ಕರಿಸಿದ್ದ ಸಿನ್ಹಾ ಅವರಿಗೆ ನ್ಯಾಯಾಲಯ 14ದಿನಗಳ ಕಾಲ ನ್ಯಾಯಾಂಗ ಬಂಧನವಿಧಿಸಿತ್ತು.
ಇದೀಗ ಸಿನ್ಹಾ ಅವರು ಜಾಮೀನಿಗೆ ಸಮ್ಮತಿ ನೀಡಿದ್ದು, ಶೀಘ್ರದಲ್ಲಿಯೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಅಲ್ಲದೆ ಬಿಡುಗಡೆಯಾದ ಬಳಿಕ ಯಶ್ವಂತ್ ಸಿನ್ಹಾ ಅವರು ತಮ್ಮ ಸ್ವಕ್ಷೇತ್ರಕ್ಕೆ ತೆರಳಿ ವಿದ್ಯುತ್ ಯೊಜನೆಯೊಂದನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕೆಲವೇ ತಿಂಗಳಲ್ಲಿ ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಿಗೆ ಪ್ರಸ್ತುತ ವಿದ್ಯುತ್ ಕೊರತೆ ಸಮಸ್ಯೆ ಚುನಾವಣಾ ಪ್ರಚಾರದ ಪ್ರಮುಖ ಅಂಶವಾಗಿರಲಿದೆ.