ಮಲೇಷ್ಯಾದಲ್ಲಿ ದೋಣಿ ಮುಳುಗಡೆ: 66 ಸಾವು
ಮಲೇಷ್ಯಾದ ಪಶ್ಚಿಮ ಕರಾವಳಿಯಲ್ಲಿ ಪ್ರಯಾಣಿಕ ದೋಣಿಯೊಂದು ಮುಳುಗಡೆಯಾಗಿದ್ದು,
ಕೌಲಾಲಂಪುರ: ಮಲೇಷ್ಯಾದ ಪಶ್ಚಿಮ ಕರಾವಳಿಯಲ್ಲಿ ಪ್ರಯಾಣಿಕ ದೋಣಿಯೊಂದು ಮುಳುಗಡೆಯಾಗಿದ್ದು, ಇಂಡೋನೇಷ್ಯಾಕ್ಕೆ ಸೇರಿದವರೆನ್ನಲಾದ 66 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಮಲೇಷ್ಯಾದ ಪಶ್ಚಿಮ ಕರಾವಳಿಯ ಬಾಂಟಿಂಗ್ ಸಮೀಪದ ಕ್ಲಾಂಗ್ ಬಂದರಿನ ಬಳಿಯಲ್ಲಿ ದೋಣಿ ಮುಳುಗಡೆಯಾಗಿದೆ. ದೋಣಿಯಲ್ಲಿ ಒಟ್ಟು 97 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದ್ದು, 31 ಮಂದಿಯನ್ನು ರಕ್ಷಣಾ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ. ದೋಣಿಯಲ್ಲಿ ಇಂಡೇನೇಷ್ಯಾಕ್ಕೇ ಸೇರಿದ 97 ಮಂದಿ ಅಕ್ರಮವಾಗಿ ಮಲೇಷ್ಯಾಗೆ ಪ್ರಯಾಣಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಸಾಮರ್ಥ್ಯಕ್ಕಿಂತ ಅಧಿಕ ಜನರು ದೋಣಿಯಲ್ಲಿ ಪ್ರಯಾಣಿಸಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಎಂಎಂಇಎ (ಮಾರಿಟೈಂ ಎನ್ಫೋರ್ಸ್ಮೆಂಟ್ ಏಜೆನ್ಸಿ) ಸಂಸ್ಥೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇಂಡೋನೇಷ್ಯಾದ ಸುಮಾತ್ರ ದ್ವೀಪ ಮತ್ತು ಮಲೇಷ್ಯಾದ ನಡುವೆ ಮಲಕ್ಕಾ ಜಲಸಂಧಿ ಇದ್ದು, ಇದೇ ಮಾರ್ಗವಾಗಿ ವರ್ಷಂಪ್ರತಿ ಅಕ್ರಮವಾಗಿ ನೂರಾರು ನುಸುಳುಕೋರರು ಮಲೇಷ್ಯಾಕ್ಕೆ ತೆರಳುತ್ತಾರೆ. ಪ್ರಸ್ತುತ ಮುಳುಗಡೆಯಾಗಿರುವ ದೋಣಿಯು ಪೋರ್ಟ್ ಕ್ಲಾಂಗ್ ಬಂದರಿನ ಸಮೀಪದಲ್ಲಿಯೇ ಮುಳುಗಡೆಯಾಗಿದ್ದು, ಪ್ರಯಾಣಿಕರು ಈಜಿ ದಡ ಸೇರಿರಬಹುದೆಂದು ಎಂಎಂಇಎ ಸಂಸ್ಥೆಯ ಮುಖ್ಯಸ್ಥ ಮಹಮದ್ ಹಂಬಾಲಿ ಯಾಕುಪ್ ಅಭಿಪ್ರಾಯಪಟ್ಟಿದ್ದಾರೆ.