ಮ್ಯಾಚ್ ಫಿಕ್ಸಿಂಗ್: ಅಶ್ರಫುಲ್ ಗೆ 8 ವರ್ಷ ನಿಷೇಧ
ಢಾಕಾ: ಬಾಂಗ್ಲಾದೇಶ ಪ್ರೀಮಿಯರ್ ಕ್ರಿಕೆಟ್ ಲೀಗ್‌ನಲ್ಲಿ ಫಿಕ್ಸಿಂಗ್ ನಡೆಸಿದ ಅಪರಾಧ ಸಾಬೀತಾದ ಹಿನ್ನಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮದ್ ಅಶ್ರಫುಲ್‌ಗೆ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ 8 ವರ್ಷಗಳ ನಿಷೇಧ ಹೇರಿದೆ.
ಬಾಂಗ್ಲಾದೇಶ ಪ್ರೀಮಿಯರ್ ಕ್ರಿಕೆಟ್ ಲೀಗ್‌ನ 2ನೇ ಸೀಸನ್ ವೇಳೆ ಅಶ್ರಫುಲ್ ಅವರು ಬುಕ್ಕಿಗಳಿಂದ ಹಣ ಪಡೆದು ಮೋಸದಾಟ ಆಡಿರುವುದು ತನಿಖೆಯಿಂದ ಸಾಬೀತಾಗಿದ್ದು, ಅಶ್ರಫಲ್ 12, 820 ಡಾಲರ್ ಹಣವನ್ನು ದಂಡವಾಗಿ ಕಟ್ಟಬೇಕು ಎಂದು ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಆದೇಶಿಸಿದೆ. ಕಳೆದ 2013ರಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ಐಸಿಸಿ ಅಕ್ರಮ ತಡೆಘಟಕದ ಅಧಿಕಾರಿಗಳು ಬಿಪಿಎಲ್ 2ನೇ ಸೀಸನ್‌ನಲ್ಲಿ ಅಕ್ರಮಗಳಾಗಿರುವ ಸಾಧ್ಯತೆಗಳ ಕುರಿತು ಬಾಂಗ್ಲಾ ಕ್ರಿಕೆಟ್ ಸಂಸ್ಥೆಯ ಗಮನ ಸೆಳೆದಿತ್ತು.
ಐಸಿಸಿಯ ಸಲಹೆಯ ಹಿನ್ನಲೆಯಲ್ಲಿ ಬಾಂಗ್ಲಾ ಕ್ರಿಕೆಟ್ ಸಂಸ್ಥೆ, ಖಾದೆಮುಲ್ ಇಸ್ಲಾಂ ಚೌದರಿ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿತ್ತು. ವಿಚಾರಣೆ ವೇಳೆ ಬಾಂಗ್ಲಾದೇಶ ತಂಡದ ಮಾಜಿ ನಾಯಕ ಮಹಮದ್ ಅಶ್ರಫುಲ್ ಅವರು ಭಾಗಿಯಾಗಿರುವುದು ಕಂಡುಬಂದಿದೆ. ಢಾಕಾ ಗ್ಲಾಡಿಯೇಟರ್ಸ್ ತಂಡದ ಪರವಾಗಿ ಆಡುತ್ತಿದ್ದ ಅಶ್ರಫುಲ್ ಅವರೇ ಅಲ್ಲದೆ ಸ್ವತಃ ತನಿಖೆ ವೇಳೆ ಅಧಿಕಾರಿಗಳ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಅಕ್ರಮದಲ್ಲಿ ಭಾಗಿಯಾಗಿದ್ದ ಇತರೆ ತಂಡಗಳ 9 ಮಂದಿ ಆಟಗಾರರ ಹೆಸರುಗಳನ್ನು ಕೂಡ ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಅಶ್ರಫುಲ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಇನ್ನು 8 ವರ್ಷಗಳ ಕಾಲ ಅಶ್ರಫುಲ್ ಅವರು ಯಾವುದೇ ಕ್ರಿಕೆಟ್ ಮಾದರಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟನ ಆದೇಶ ಹೊರಡಿಸಿದೆ.