ಪ್ರೀತಿ ಜಿಂಟಾ ಕೇಸ್ ಗೆ 'ಅರ್ಜುನ್' ಟ್ವಿಸ್ಟ್
ಬಾಲಿವುಡ್ ನಟಿ ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಮುಂಬೈ ಪೊಲೀಸರು ಅರ್ಜುನ್ ತೆಂಡೂಲ್ಕರ್ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.
ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಮತ್ತು ನೆಸ್ ವಾಡಿಯಾ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು, ಮುಂಬೈ ಪೊಲೀಸರು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಹೇಳಿಕೆಯನ್ನು ಸಾಕ್ಷಿಯಾಗಿ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.
ಪ್ರೀತಿ ಜಿಂಟಾ ಅವರ ಮಾಜಿ ಗೆಳೆಯ ನೆಸ್ವಾಡಿಯಾ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಅರ್ಜುನ್ ಹೇಳಿಕೆ ತಿರುವು ನೀಡಲಿದೆ ಎಂದು ಹೇಳಲಾಗುತ್ತಿದೆ. ಪ್ರಕರಣ ಸಂಬಂಧ ಮುಂಬೈ ಪೊಲೀಸರು ಇಂದು ಅರ್ಜುನ್ ತೆಂಡೂಲ್ಕರ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲ್ಲಿದ್ದಾರೆ. ಅರ್ಜುನ್ ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರನಾಗಿದ್ದು, ಘಟನೆ ವೇಳೆ ಈತ ಕೂಡ ಸ್ಥಳದಲ್ಲಿಯೇ ಇದ್ದ ಎಂದು ತಿಳಿದುಬಂದಿದೆ. ಅಲ್ಲದೆ ಗಲಾಟೆ ವೇಳೆ ನೆಸ್ ವಾಡಿಯಾ ಅವರು ಅರ್ಜುನ್ಗೂ ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದರು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು, ವಾಂಖೆಡೆ ಕ್ರೀಡಾಂಗಣದ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದರು. ಆದರೆ ಪೊಲೀಸರಿಗೆ ಅದರಿಂದ ಯಾವುದೇ ಮಹತ್ವದ ಸುಳಿವುಗಳು ಲಭಿಸಿರಲಿಲ್ಲ. ಆದರೆ ತನಿಖೆ ಮುಂದುವರೆಸಿರುವ ಪೊಲೀಸರು, ಪ್ರೀತಿಗೆ ನೆಸ್ ವಾಡಿಯಾ ಕಳುಹಿಸಿದ್ದ ಬೆದರಿಕೆ ಇ-ಮೇಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ಸಚಿನ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿರುವ ಪೊಲೀಸರು, ಅದನ್ನು ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.
ಕಳೆದ ಮೇ 30ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ವೇಳೆ ಪ್ರೀತಿ ಮತ್ತು ನೆಸ್ ವಾಡಿಯಾ ಅವರ ನಡುವೆ ಜಗಳ ನಡೆದಿದ್ದು, ನಟಿ ಪ್ರೀತಿ ಜಿಂಟಾ ನೆಸ್ ವಾಡಿಯಾ ಅವರ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದೂರು ದಾಖಲಿಸಿದ್ದರು. ಇದೀಗ ಆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಮುಂಬೈ ಪೊಲೀಸರು ಈಗಾಗಲೇ ಪ್ರೀತಿ ಮತ್ತು ನೆಸ್ ವಾಡಿಯಾ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಇದೇ ವಾರಾಂತ್ಯದಲ್ಲಿ ಮತ್ತೆ ಪ್ರೀತಿ ಜಿಂಟಾ ಅವರ ಹೇಳಿಕೆಯನ್ನು ಮತ್ತೆ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ.