ಹಿಂದಿಯಲ್ಲ ಅಭಿವೃದ್ಧಿ ಕಡೆ ಗಮನ ಕೊಡಿ: ಮೋದಿಗೆ ಕರುಣಾನಿಧಿ ಟಾಂಗ್
ಹಿಂದಿ ಭಾಷೆಯಲ್ಲ ಮೊದಲು ದೇಶದ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಹೇಳಿದ್ದಾರೆ.
ಚೆನ್ನೈ: ಹಿಂದಿ ಭಾಷೆಯಲ್ಲ ಮೊದಲು ದೇಶದ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಹೇಳಿದ್ದಾರೆ.
ಚೆನ್ನೈನಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ದೇಶದ ಅಭಿವೃದ್ಧಿ ಕಡೆ ಗಮನ ಹರಿಸಬೇಕೇ ಹೊರತು ಹಿಂದಿ ಭಾಷೆಯನ್ನು ಪ್ರಚಾರ ಮಾಡುವ ಕುರಿತಾಗಿಯಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪರೋಕ್ಷ ಟಾಂಗ್ ನೀಡಿದ್ದಾರೆ. 'ಕೇಂದ್ರ ಗೃಹ ಇಲಾಖೆಯ ನಿರ್ಧಾರದಿಂದಾಗಿ ಹಿಂದಿ ಭಾಷೆಯನ್ನು ಮಾತನಾಡದ ಅಲ್ಪ ಸಂಖ್ಯಾತರಿಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತದೆ. ದಶಕಗಳ ಹಿಂದಿನ ಭಾಷಾ ಸಮರ ಇನ್ನೂ ಸಂಪೂರ್ಣವಾಗಿ ತಣ್ಣಗಾಗಿಲ್ಲ' ಎಂದು ಕರುಣಾನಿಧಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯನ್ನು ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಆಂಗ್ಲ ಭಾಷೆಯನ್ನು ಎರಡನೆಯ ಆಯ್ಕೆಯ ಭಾಷೆಯಾಗಿ ಬಳಸಬಹುದು ಎಂದು ಕೇಂದ್ರ ಗೃಹಇಲಾಖೆ ಕಳೆದ ಮೇ 27ರಂದು ಹೊರಡಿಸಿತ್ತು. 1965ರಲ್ಲಿ ಹಿಂದಿಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದ ಡಿಎಂಕೆ ಪಕ್ಷ ಇದೇ ವಿಚಾರವನ್ನು ಚುನಾವಣಾ ಪ್ರಚಾರದ ಅಸ್ತ್ರವಾಗಿ ಬಳಸಿಕೊಂಡು ತಮಿಳುನಾಡಿನಲ್ಲಿ ಅಧಿಕಾರದ ಗದ್ದುಗೆ ಏರಿತ್ತು.
ಹಿಂದಿಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸುವ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಅವರ ನೇತೃತ್ವದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಮಿಳುನಾಡಿನಾಧ್ಯಂತ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಹಿಂದಿ ಬಳಸದ ರಾಜ್ಯಗಳಲ್ಲಿ ಸಾಕಷ್ಟು ಹಿಂಸಾಚಾರಕ್ಕೂ ಕೂಡ ಕಾರಣವಾಗಿತ್ತು. ಬಳಿಕ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಈ ನಿರ್ಧಾರವನ್ನು ಹಿಂಪಡೆದು, ಹಿಂದಿ ಮಾತನಾಡದ ಹಿಂದಿಯನ್ನು ಅಧಿಕೃತವಾಗಿ ಬಳಸದ ರಾಜ್ಯಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಟ್ಟರು.