ಇರಾಕ್: ಅಪಹೃತ ಭಾರತೀಯರು ಸುರಕ್ಷಿತ; ವಿದೇಶಾಂಗ ವಕ್ತಾರರ ಹೇಳಿಕೆ
ಇರಾಕ್‌ನ ಮೊಸುಲ್ ನಗರದಿಂದ ಅಪಹರಣಕ್ಕೀಡಾಗಿದ್ದ 40 ಮಂದಿ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ನವದೆಹಲಿ: ಇರಾಕ್‌ನ ಮೊಸುಲ್ ನಗರದಿಂದ ಅಪಹರಣಕ್ಕೀಡಾಗಿದ್ದ 40 ಮಂದಿ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.
ನವದೆಹಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಕ್ಬರುದ್ದೀನ್ ಅವರು ಇರಾಕ್ ಉಗ್ರಗಾಮಿ ಸಂಘಟನೆ ಇಸಿಸ್ ಸಂಘಟನೆಯಿಂದ ಅಪಹರಣಕ್ಕೀಡಾಗಿದ್ದ 40 ಮಂದಿ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಳ ಅಗತ್ಯವಿದೆ. ನಾವು ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.
ಆದರೆ ಅಪಹೃತರನ್ನು ಇಡಲಾಗಿರುವ ಸ್ಥಳದ ಕುರಿತು ಅಕ್ಬರುದ್ದೀನ್ ಅವರು ಯಾವುದೇ ರೀತಿಯ ಮಾಹಿತಿ ನೀಡಲಿಲ್ಲ. ಹೀಗಾಗಿ ಸಂಬಂಧಿಕರ ಆಂತಕ ಇನ್ನೂ ಮುಂದುವರೆದಿದೆ.
ಇರಾಕ್ ವಿರುದ್ಧ ದೊಡ್ಡಣ್ಣ ಗರಂ
ಈ ನಡುವೆ ಇರಾಕ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಮೆರಿಕದ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಇರಾಕ್ ಅಧ್ಯಕ್ಷ 'ನೂರಿ ಅಲ್ ಮಲಿಕಿ' ಅವರ ವಿರುದ್ಧ ಅಸಾಮಾಧಾನಗೊಂಡಿದ್ದಾರೆ. ಪ್ರಧಾನಿ ಮಲಿಕಿ ಅವರು ಒಂದು ದೇಶದ ಪ್ರಧಾನಿಯಾಗಿದ್ದು ಕೊಂಡು ಒಂದು ವರ್ಗ ಅಥವಾ ಪಂಥೀಯ(ಶಿಯಾ)ರ ಪರವಾಗಿ ನಿಂತಿದ್ದಾರೆ. ಅಧಿಕಾರ ಉಭಯ ಪಂಗಡ (ಶಿಯಾ ಮತ್ತು ಸುನ್ನಿ)ಗಳೊಂದಿಗೆ ಹಂಚಿಕೆ ಮಾಡಿಕೊಳ್ಳುವವರೆಗೂ ಇಂತಹ ಸಂಘರ್ಷಗಳು ಕೊನೆಗಾಣುವುದಿಲ್ಲ ಎಂದು ಹೇಳಿದರು.
ಒಬಾಮ ವಿರುದ್ಧ ಹರಿಹಾಯ್ದ ಇರಾನ್
ಇರಾಕ್ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಇರಾನ್ ಅಮೆರಿಕ ಅದ್ಯಕ್ಷ ಬರಾಕ್ ಒಬಾಮ ಅವರ ವಿರುದ್ಧ ಕಿಡಿಕಾರಿದ್ದಾರೆ. ಪ್ರಸ್ತುತ ಇರಾಕ್ ಬಿಕ್ಕಟ್ಟಿಗೆ ಒಬಾಮ ಅವರೇ ಪರೋಕ್ಷ ಕಾರಣ ಎಂದಿರುವ ಇರಾನ್, ಭಯೋತ್ಪಾದನೆಯನ್ನು ಒಬಾಮ ಅವರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದೆ. ಅಲ್ಲದೆ ಬಾಗ್ದಾದ್‌ಗೆ ಭದ್ರತಾ ಸಲಹೆಗಾರರನ್ನು ಕಳುಹಿಸಿರುವ ಅಮೇರಿಕ, ಇರಾಕ್ ಸರ್ಕಾರದ ಮನವಿಯ ಹೊರತಾಗಿಯೂ ಉಗ್ರರ ಮೇಲಿನ ವಾಯುದಾಳಿ ಕುರಿತಂತೆ ಅಮೆರಿಕ ಉತ್ತರವನ್ನೇ ನೀಡಿಲ್ಲ ಎಂದು ಹೇಳಿದರು.
ತಿರುಗಿ ಬೀಳಲು ಸಿದ್ಥತೆ ನಡೆಸುತ್ತಿರುವ ಇರಾಕ್ ಸೈನಿಕರು, ಮೈಲುಗೈ ಸಾಧಿಸುತ್ತಿರುವ ಸುನ್ನಿ ಬಂಡುಕೋರರು
ಇರಾಕ್‌ನ ಅತಿದೊಡ್ಡ ತೈಲಘಟಕ ಬೈಜಿ ತೈಲಾಗಾರದ ಮೇಲೆ ತಮ್ಮ ಹತೋಟಿ ಸಾಧಿಸಿದ್ದ ಸುನ್ನಿ ಬಂಡುಕೋರರು ದಿನಗಳೆದಂತೆ ಬಾಗ್ದಾದ್‌ನತ್ತ ಮುನ್ನುಗ್ಗುತ್ತಿದ್ದಾರೆ. ಪ್ರಸ್ತುತ ಇರಾಕ್ ಸೈನಿಕರು ಬೈಜಿ ತೈಲ ಘಟಕದ ಮೇಲೆ ಮತ್ತೆ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಗ್ದಾದ್‌ನಿಂದ ಕೇವಲ 60 ಕಿ.ಮೀ ದೂರದಲ್ಲಿರುವ ಸಮರ್ರಾ ಪ್ರಾಂತ್ಯಾವನ್ನು ಇಸಿಸ್ ಪಡೆಗಳು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ. ಅಲ್ಲದೆ ಯುದ್ಧದಲ್ಲಿ ಸೆರೆಯಾದ ಸುಮಾರು 1700 ಕ್ಕೂ ಅಧಿಕ ಇರಾಕ್ ಸೈನಿಕರನ್ನು ಸುನ್ನಿ ಬಂಡುಕೋರರು ಅಮಾನುಷವಾಗಿ ಸಾಮೂಹಿಕವಾಗಿ ಹತ್ಯೆ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಸುನ್ನಿ ಬಂಡುಕೋರರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಥಳೀಯ ಸುನ್ನಿ ಸಂಘಟನೆಯ ಬೆಂಬಲಿಗರು ಕೂಡ ಬಂಡುಕೋರರಿಗೆ ನೆರವು ನೀಡುತ್ತಿರುವುದು ಇರಾಕ್ ಸರ್ಕಾರಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ಹೀಗಾಗಿಯೇ ಇರಾಕ್ ಸರ್ಕಾರ ವಿಶ್ವದ ದೊಡ್ಡಣ್ಣ ಅಮೆರಿಕದ ನೆರವು ಕೋರಿದೆ. ಇರಾಕ್ ಸರ್ಕಾರದ ಮನವಿಯನ್ನು ಪುರಸ್ಕರಿಸಿರುವ ಅದ್ಯಕ್ಷ ಬರಾಕ್ ಒಬಾಮ ಅವರು ಈಗಾಗಲೇ ಭದ್ರತಾ ಸಲಹೆಗಾರರನ್ನು ಬಾಗ್ದಾದ್‌ಗೆ ರವಾನಿಸಿದ್ದು, 300 ಮಂದಿ ಉನ್ನತ ಮಟ್ಟದ ಭದ್ರಾತಾ ಸಿಬ್ಬಂದಿಗಳನ್ನು ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ದಿನೇ ದಿನೇ ಇರಾಕ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಉಗ್ರರ ವಿರುದ್ಧ ವೈಮಾನಿಕ ಕಾರ್ಯಾಚರಣೆ ನಡೆಸಲು ಒಬಾಮ ನಿರ್ಧರಿಸಿದ್ದಾರೆಯಾದರೂ ಗುಪ್ತಚರ ಇಲಾಖೆಗಳಿಂದ ಈ ಕುರಿತು ಪೂರಕ ಮಾಹಿತಿಗಳು ಲಭ್ಯವಾಗದ ಹಿನ್ನಲೆಯಲ್ಲಿ ವಾಯುದಾಳಿಗೆ ಒಬಾಮ ಹಿಂದೇಟು ಹಾಕುತ್ತಿದ್ದಾರೆ.