ಇರಾಕ್: ಅಪಾಯದಲ್ಲಿ ಸಿಲುಕಿದ್ದ 16 ಮಂದಿ ಭಾರತೀಯರ ರಕ್ಷಣೆ
ಸುನ್ನಿ ಉಗ್ರರ ದಾಳಿಯಿಂದಾಗಿ ಅಪಾಯಕ್ಕೆ ಸಿಲುಕಿದ್ದ 16 ಮಂದಿ ಭಾರತೀಯರನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಾಗ್ದಾದ್: ಸುನ್ನಿ ಉಗ್ರರ ದಾಳಿಯಿಂದಾಗಿ ಅಪಾಯಕ್ಕೆ ಸಿಲುಕಿದ್ದ 16 ಮಂದಿ ಭಾರತೀಯರನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇಸಿಸ್ ಬಂಡುಕೋರರ ವಶದಲ್ಲಿದ್ದ 40 ಮಂದಿ ಭಾರತೀಯರ ಪೈಕಿ ಓರ್ವ ತಪ್ಪಿಸಿಕೊಂಡು ಬಂದಿದ್ದು, ಇರಾಕ್ ಪಡೆಗಳಿಗೆ ದೊರೆತಿದ್ದಾನೆ. ಕೂಡಲೇ ಆತನನ್ನು ಬಾಗ್ದಾದ್‌ನಲ್ಲಿರುವ ಭದ್ರತಾ ಪಡೆಗಳ ರಕ್ಷಣೆಯಲ್ಲಿ ಇರಿಸಲಾಗಿದೆ. ಅಂತೆಯೇ ಇರಾಕ್‌ನ ವಿವಿಧೆಡೆ ಅಪಾಯದಲ್ಲಿ ಸಿಲುಕಿದ್ದ ಇತರೆ 15 ಮಂದಿ ಭಾರತೀಯರನ್ನು ಕೂಡ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಸ್ತುತ ಮೊಸುಲ್ ನಗರವನ್ನು ತಮ್ಮ ನಿಯಂತ್ರಣಕ್ಕೆ ಪಡೆದಿರುವ ಇರಾಕ್ ಪಡೆಗಳು ಸುನ್ನಿ ಬಂಡುಕೋರರ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.
ವಿದೇಶಾಂಗ ಇಲಾಖೆಯ ವಕ್ತಾರ ಸೈಯ್ಯದ್ ಅಕ್ಬರುದ್ದೀನ್ ಅವರು ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲಿಯೇ ಇರಾಕ್‌ನಿಂದ ಭಾರತೀಯರ ಸುರಕ್ಷತೆಯ ಕುರಿತ ಮಾಹಿತಿ ಲಭ್ಯವಾಗುತ್ತಿವೆ. ಪ್ರಸ್ತುತ ಸಂರಕ್ಷಿಸಲ್ಪಟ್ಟ ಭಾರತೀಯರನ್ನು ರಾಜಧಾನಿ ಬಾಗ್ದಾದ್ ನಲ್ಲಿರುವ ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.