ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಕ್ಯಾಂಪಾಕೋಲಾ' ನಿವಾಸಿಗಳ ವಿರುದ್ಧ 'ನ್ಯಾಯಾಂಗ ನಿಂದನೆ' ದೂರು

ಮುಂಬೈನಲ್ಲಿ ಹೈಡ್ರಾಮ, 'ಸುಪ್ರೀಂ' ಆದೇಶ..

Srinivasa Murthy VN
Updated On : 20 Jun 2014, 5:33 am

ಮುಂಬೈ: ಸರ್ವೋಚ್ಚ ನ್ಯಾಯಾಲಯದ ಆದೇಶದ ಹೊರತಾಗಿಯೂ ಮುಂಬೈನ ಕ್ಯಾಂಪಾಕೋಲಾ ನಿವಾಸಿಗಳು ಜಾಗ ಖಾಲಿ ಮಾಡದ ಹಿನ್ನಲೆಯಲ್ಲಿ ಬಿಎಂಸಿ ಅಧಿಕಾರಿಗಳು ನಿವಾಸಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಿದ್ದಾರೆ.

ಮುಂಬೈನಲ್ಲಿರುವ ಈ ಕ್ಯಾಂಪಾಕೋಲಾ ವಸತಿ ಸಮುಚ್ಚಯವನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ನಿವಾಸಗಳನ್ನು ಖಾಲಿ ಮಾಡುವಂತೆ ನ್ಯಾಯಾಲಯ ನೀಡಿದ್ದ ಕಾಲಾವಕಾಶ ಇಂದಿಗೆ ಕೊನೆಗೊಂಡಿದೆ. ಹೀಗಾಗಿ ವಸತಿ ಸಮುಚ್ಛಯವನ್ನು ಖಾಲಿ ಮಾಡಿಸಲು ಬಂದಿದ್ದ ನಾಗರೀಕ ಸೇವಾ ಅಧಿಕಾರಿಗಳನ್ನು ಅಲ್ಲಿನ ನಿವಾಸಿಗಳು ಗೇಟ್ ಹೊರಗಡೆಯೇ ಇಟ್ಟು, ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳು ನಿವಾಸಿಗಳ ಮನವೊಲಿಕೆಗೆ ಎಷ್ಟೇ ಪ್ರಯತ್ನಿಸಿದರೂ ಕೂಡ ನಿವಾಸಿಗಳು ತಮ್ಮ ತಮ್ಮ ನಿವಾಸಗಳನ್ನು ಖಾಲಿ ಮಾಡಲು ಒಪ್ಪುತ್ತಿಲ್ಲ. ಬದಲಿಗೆ ಅಧಿಕಾರಿಗಳನ್ನೇ ಗೇಟ್‌ನಿಂದ ಹೊರಗಿಟ್ಟು ಗೇಟ್‌ಗೆ ಬೀಗ ಜಡಿದಿದ್ದಾರೆ.

ಹೀಗಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, 100ಕ್ಕೂ ಅಧಿಕ ಮಂದಿ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಈ ನಡುವೆ ಮುಂಬೈನ ನಾಗರೀಕ ಸೇವಾ ಅಧಿಕಾರಿಗಳು ಕ್ಯಾಂಪಾಕೋಲಾ ವಸತಿ ಸಮುಚ್ಚಯದ ನೀರು, ಗ್ಯಾಸ್ ಮತ್ತು ವಿದ್ಯುತ್ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಆದರೆ ಅಧಿಕಾರಿಗಳ ಯಾವುದೇ ಒತ್ತಡಕ್ಕೂ ಮಣಿಯದ ನಿವಾಸಿಗಳು ಪ್ರಾಣ ಹೋದರು ತಮ್ಮ ಮನೆಗಳನ್ನು ಖಾಲಿ ಮಾಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

2005ರಿಂದಲೂ ನ್ಯಾಯಾಲಯದಲ್ಲಿ 'ಕ್ಯಾಂಪಾಕೋಲಾ' ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸೊಸೈಟಿಯ ಅಧಿಕಾರಿಗಳು ಪಾಲಿಕೆಗೆ ನೀಡಿದ್ದ ಮೂಲನಕ್ಷೆಯನ್ನು ತಿರುಚಿ ಹೆಚ್ಚುವರಿ ಫ್ಲಾಟ್‌ಗಳನ್ನು ನಿರ್ಮಿಸಿದ್ದಾರೆ ಎಂಬ ಆರೋಪ ಸೊಸೈಟಿಯ ಅಧಿಕಾರಿಗಳ ಮೇಲಿದೆ. 1989ರಲ್ಲಿ ನಿರ್ಮಿಸಲ್ಪಟ್ಟಿದ್ದ ಈ ವಸತಿ ಸಮುಚ್ಚಯಕ್ಕೆ ಮುಂಬೈ ಮಹಾನಗರ ಪಾಲಿಕೆ ಕೇವಲ 5 ಅಂತಸ್ತುಗಳಿಗೆ ಮಾತ್ರ ಅನುಮತಿ ನೀಡಿತ್ತು. ಆದರೆ ಕ್ಯಾಂಪಾಕೋಲಾ ಸೊಸೈಟಿ ಅಧಿಕಾರಿಗಳು ಮೂಲನಕ್ಷೆಯನ್ನು ತಿರುಚಿ ಅಕ್ರಮವಾಗಿ ಸಾಕಷ್ಟು ಅಂತಸ್ತುಗಳನ್ನು ನಿರ್ಮಿಸಿದ್ದಾರೆ.

ಇದೀಗ ಈ ವಸತಿ ಸಮುಚ್ಚಯದಲ್ಲಿ ಒಟ್ಟು 20 ಅಂತಸ್ತುಗಳಿದ್ದು, ಹೆಚ್ಚುವರಿಯಾಗಿ ಸುಮಾರು 107 ಫ್ಲಾಟ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಈಗ ಸುಮಾರು 500 ಕ್ಕೂ ಅಧಿಕ ನಿವಾಸಿಗಳು ವಾಸವಾಗಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿದ್ದ ಈ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ನಲ್ಲಿ ತನ್ನ ತೀರ್ಪು ನೀಡಿದ್ದು, ಜಾಗ ಖಾಲಿ ಮಾಡುವಂತೆ 8 ತಿಂಗಳ ಗಡುವು ನೀಡಿತ್ತು. ಹೀಗಾಗಿ ಇಂದು ನ್ಯಾಯಾಲಯ ನೀಡಿದ್ದ ಗಡುವು ಮುಗಿದಿದ್ದು, ಬಿಎಂಸಿ ಅಧಿಕಾರಿಗಳು ಕಟ್ಟಡ ತೆರವಿಗೆ ಮುಂದಾಗಿದ್ದಾರೆ.

ಪ್ರಾಣ ಹೋದರೂ ಜಾಗ ಖಾಲಿ ಮಾಡುವುದಿಲ್ಲ: ಸ್ಥಳೀಯ ನಿವಾಸಿಗಳು ಬಿಗಿ ಪಟ್ಟು

ಅತ್ತ ಜಾಗ ಖಾಲಿ ಮಾಡಿಸಲು ಬಿಎಂಸಿ ಅಧಿಕಾರಿಗಳು ನಿವಾಸಿಗಳ ಮೇಲೆ ಮುಗಿಬಿದಿದ್ದರೆ ಇತ್ತ ಅಲ್ಲಿನ ನಿವಾಸಿಗಳು ಪ್ರಾಣ ಹೋದರೂ ನಾವು ಜಾಗ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ನಮಗೆ ಈ ಮನೆಗಳನ್ನು ಹೊರತು ಪಡಿಸಿದರೆ ಬೇರಾವುದೇ ಜಾಗ ಅಥವಾ ನಿವಾಸಗಳಿಲ್ಲ. ಹೀಗಿರುವಾಗ ಅಧಿಕಾರಿಗಳು ನಮ್ಮನ್ನು ಹೊರದಬ್ಬಿದರೆ ನಾವು ಬೀದಿಪಾಲಾಗುತ್ತೇವೆ. ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.

ಒಟ್ಟಾರೆ ಹಣದ ಆಸೆಗೆ ಬಿಲ್ಡರ್‌ಗಳು ಮಾಡಿದ ಎಡವಟ್ಟಿಗೆ, ಇದೀಗ ಅಲ್ಲಿನ ನಿವಾಸಿಗಳು ದುಬಾರಿ ಬೆಲೆಯನ್ನೇ ತೆರಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement