ಬಾಕಿ ಹಣ ನೀಡಿ ಇಲ್ಲ ಕಾರ್ಖಾನೆ ಮುಚ್ಚಿ: ಸಿಎಂ ಸಿದ್ದು
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಕ್ಕರೆ ಕಾರ್ಖಾನೆಗಳಿಗೆ 2 ದಿನಗಳ ಅಂತಿಮ ಗಡುವು ನೀಡಿದ್ದು, ಕಬ್ಬು ಬೆಳಗಾರರ ಬಾಕಿ ಹಣ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಕಬ್ಬು ಬೆಳಗಾರರ ಬಾಕಿ ಹಣ ನೀಡದೇ ಸತಾಯಿಸುತ್ತಿದ್ದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಕ್ಕರೆ ಕಾರ್ಖಾನೆಗಳಿಗೆ 2 ದಿನಗಳ ಅಂತಿಮ ಗಡುವು ನೀಡಿದ್ದಾರೆ.
ಇಂದು ವಿಧಾನಸೌಧದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅದ್ಯಕ್ಷ ಕುರುಬೂರು ಶಾಂತಕುಮಾರ್ ಅವರೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಇನ್ನೆರಡು ದಿನಗಳಲ್ಲಿ ರೈತರಿಂದ ಬಾಕಿ ಉಳಿಸಿಕೊಂಡಿರುವ ಬಾಕಿ ಹಣವನ್ನು ಪಾವತಿ ಮಾಡಬೇಕು. ಇಲ್ಲವಾದಲ್ಲಿ ಕಾರ್ಖಾನೆಗಳಿಗೆ ರಾಜ್ಯ ಸರ್ಕಾರ ಬೀಗ ಜಡಿಯಲಿದ್ದು, ಸಕ್ಕರೆಯನ್ನು ಮಾರಿ ಅಥವಾ ಮಾಲೀಕರಿಗೆ ಸಂಬಂಧಪಟ್ಟ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಬಾಕಿ ಹಣ ಪಾವತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ರಾಜ್ಯ ಕಬ್ಬು ಬೆಳೆಗಾರರು ತಮ್ಮ ಪಾಲಿನ ಸಬ್ಸಿಡಿ ಹಣವನ್ನು ನಾಳೆಯಿಂದಲೇ ಆಯಾ ಜಿಲ್ಲೆಗಳ ಡಿಸಿ ಕಚೇರಿಗೆ ತೆರಳಿ ಪಡೆಯಬಹುದು ಎಂದು ಸಿದ್ಧರಾಮಯ್ಯ ಹೇಳಿದರು. ಈ ಹಿಂದೆ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಪ್ರತಿ ಟನ್ ಕಬ್ಬಿಗೆ ರಾಜ್ಯ ಸರ್ಕಾರ 2,500 ರುಗಳನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ವರೆಗೂ ಸಕ್ಕರೆ ಕಾರ್ಖಾನೆಗಳು ಆ ಮೊತ್ತವನ್ನು ನೀಡಿಲ್ಲ. ಹೀಗಾಗಿ ಇಂದು ನಡೆದ ಸಭೆಯಲ್ಲಿ ಆ ಬಗ್ಗೆ ಚರ್ಚೆ ನಡೆಸಲಾಗಿದೆ. ಕಬ್ಬು ಬೆಳೆಗೆ ಸರ್ಕಾರ ಘೋಷಿಸಿದ್ದ 150 ರು. ಬೆಂಬಲ ಬೆಲೆಯನ್ನು ಕೂಡಲೇ ಬಿಡುಗಡೆ ಮಾಡುವುದಾಗಿಯೂ ಮತ್ತು ನಾಳೆಯಿಂದಲೇ ರೈತರು ಆ ಹಣವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅದ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಅವರು ಪಾಲ್ಗೊಂಡಿದ್ದರು.