ಇರಾಕ್: ಪ್ರಭುತ್ವ ಸಾಧಿಸುತ್ತಿರುವ ಬಂಡುಕೋರರು
ಇರಾಕ್‌ನ ಆಂತರಿಕ ಬಿಕ್ಕಟ್ಟು ದಿನಗಳೆದಂತೆ ತಾರಕ್ಕೇರುತ್ತಿದ್ದು, ಇರಾಕ್ ಸರ್ಕಾರದ ಆಡಳಿತವಿದ್ದ ನಗರಗಳಲ್ಲಿ ಸುನ್ನಿ ಬಂಡುಕೋರರು ಪ್ರಭುತ್ವ ಸಾಧಿಸುತ್ತಿದ್ದಾರೆ.
ಬಾಗ್ದಾದ್: ಇರಾಕ್‌ನ ಆಂತರಿಕ ಬಿಕ್ಕಟ್ಟು ದಿನಗಳೆದಂತೆ ತಾರಕ್ಕೇರುತ್ತಿದ್ದು, ಇರಾಕ್ ಸರ್ಕಾರದ ಆಡಳಿತವಿದ್ದ ನಗರಗಳಲ್ಲಿ ಸುನ್ನಿ ಬಂಡುಕೋರರು ಪ್ರಭುತ್ವ ಸಾಧಿಸುತ್ತಿದ್ದಾರೆ.
ನಿನ್ನೆ ಬಾಗ್ದಾದ್ ಸಮೀಪದ ಕೇಮ್ ನಗರದ ಮೇಲೆ ದಾಳಿ ನಡೆಸಿ ನಗರವನ್ನು ತಮ್ಮ ವಶಕ್ಕೆ ಪಡೆದಿದ್ದ ಸುನ್ನಿ ಉಗ್ರರು, ಇಂದು ಕೂಡ ತಮ್ಮ ದಾಳಿ ಮುಂದುವರೆಸಿದ್ದಾರೆ. ಬಾಗ್ದಾದ್ ನಗರದ ಪಶ್ಚಿಮದಲ್ಲಿರುವ ಅನ್ಬರ್ ಪ್ರಾಂತ್ಯವನ್ನು ಉಗ್ರರು ಇಂದು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕೇವಲ 2 ದಿನಗಳಲ್ಲಿ ಇರಾಕ್ ಸರ್ಕಾರ ತನ್ನ ಪ್ರಮುಖ ನಾಲ್ಕು ನಗರಗಳನ್ನು ಕಳೆದುಕೊಂಡಿದ್ದು, ನೂರಾರು ಸೈನಿಕರನ್ನು ಸುನ್ನಿ ಉಗ್ರರು ಕಗ್ಗೊಲೆ ಗೈದಿದ್ದಾರೆ.
ಅಂತೆಯೇ ನಿನ್ನೆ ರಾತ್ರಿಯಷ್ಟೇ ಉಗ್ರರು ಜೋರ್ಡಾನ್ ಗಡಿಯಿಂದ ಕೇವಲ 150 ಕಿ.ಮೀ ದೂರದಲ್ಲಿರುವ ರುತ್ಬಾ ನಗರವನ್ನು ಕೂಡ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುಮಾರು 40 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದ್ದ ರುತ್ಬಾ ನಗರದಲ್ಲಿ 20 ಸಾವಿರಕ್ಕೂ ಅಧಿಕ ಜನ ಇರಾಕ್ ತೊರೆದು ಗುಳೆ ಹೊರಟಿದ್ದಾರೆ. ಇರಾಕ್‌ನಲ್ಲಿ ಪ್ರಸ್ತುತ ಎದುರಾಗಿರುವ ಆಂತರಿಕ ಬಿಕ್ಕಟ್ಟು ಪ್ರಧಾನಿ ನೂರಿ ಅಲ್ ಮಲಿಕ್ ಅವರಿಗೆ ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿ ಮಾರ್ಪಟ್ಟಿದೆ. ಮಿಲಿಟರಿ ಪಡೆಗಳನ್ನು ಪಂಥೀಯ ಸಂಘರ್ಷಕ್ಕೆ ಬಳಸಿಕೊಳ್ಳುತ್ತಿರುವ ಪ್ರಧಾನಿ ಮಲಿಕಿ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯ ಕೆಂಗಣ್ಣು ಬೀರಿದೆ.
ಈ ಹಿಂದೆಯೇ ವಿಶ್ವಸಂಸ್ಥೆ ಇರಾಕ್ ಪ್ರಧಾನಿಗೆ ಯುದ್ಧಾಪರಾಧದ ಎಚ್ಚರಿಕೆ ನೀಡಿತ್ತಾದರೂ ನೂರಿ ಅಲ್ ಮಲಿಕ್ ಅವರು ಇನ್ನೂ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ ಪ್ರಸ್ತುತ ಇರಾಕ್‌ನಲ್ಲಿ ನಡೆಯುತ್ತಿರುವ ಆಂತರಿಕ ಜನಾಂಗೀಯ ಕದನ 2006ರ ಸಂಘರ್ಷವನ್ನು ನೆನಪಿಸುತ್ತಿದೆ. ಇತ್ತ ಇಷ್ಟು ದಿನ ಸುಮ್ಮನಿದ್ದ ಶಿಯಾ ಪಂಗಡದ ಧರ್ಮಗುರುಗಳು ಇದೀಗ ಇರಾಕ್ ಸೈನಿಕರಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. ಶಿಯಾ ಪಂಗಡದ ಸಾವಿರಾರು ಶಸ್ತ್ರಸಜ್ಜಿತ ಯುವಕ ಯುವತಿಯರು ಬಾಗ್ದಾದ್‌ನ ಬೀದಿ ಬೀದಿಗಳಲ್ಲಿ ತಿರುಗುತ್ತಿದ್ದು, ಸಂಘರ್ಷ ಮತ್ತಷ್ಟು ವಿದ್ವಂಸಕ ಕೃತ್ಯಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ.
ಒಟ್ಟಾರೆ ಇರಾಕ್‌ನ ಆಂತರಿಕ ಕದನ ಇಷ್ಟರ ಮಟ್ಟಿಗೆ ವಿದ್ವಂಸಕವಾಗಿ ಬೆಳೆಯಲು ಇರಾಕ್ ಪ್ರಧಾನಿ ನೂರಿ ಅಲ್ ಮಲಿಕಿ ಅವರ ಪಂಥೀಯ ಮನೋಧರ್ಮವೇ ಕಾರಣ ಎಂದು ಹೇಳಲಾಗುತ್ತಿದೆ.
ಸಂಕಷ್ಟದಲ್ಲಿ ಭಾರತೀಯರು: ತಾಳ್ಮೆ ವಹಿಸುವುದನ್ನು ಬಿಟ್ಟು ಭಾರತಕ್ಕೆ ಬೇರೆ ದಾರಿಯಿಲ್ಲ
ಇನ್ನು ಇರಾಕ್‌ನ ಆಂತರಿಕ ಕಲಹದಿಂದ ಅಪಾಯಕ್ಕೆ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಹವಣಿಸುತ್ತಿರುವ ಭಾರತ ಸರ್ಕಾರಕ್ಕೆ ಕಾಯುವುದನ್ನು ಬಿಟ್ಟು ಬೇರೆ ಮಾರ್ಗವೇ ಇಲ್ಲದಂತಾಗಿದೆ. ಸುಮಾರು 3 ಲಕ್ಷದ 50 ಸಾವಿರ ಸೈನಿಕರನ್ನು ಹೊಂದಿರುವ ಇರಾಕ್ ಮಿಲಿಟರಿ ಪಡೆಗೇ ಸುನ್ನಿ ಬಂಡುಕೋರರು ಸವಾಲಾಗಿ ಪರಿಣಿಮಿಸಿದ್ದು, ಇರಾಕ್ ಸರ್ಕಾರಕ್ಕೆ ಅಮೆರಿಕ ಮಿಲಿಟರಿ ಬೆಂಬಲ ನೀಡದ ಹೊರತು ಆ ದೇಶದ ಆಂತರಿಕ ಸಂಘರ್ಷ ಕೊನೆಗಾಣುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಪ್ರಸ್ತುತ ಇಸಿಸ್ ಬಂಡುಕೋರರ ವಶದಲ್ಲಿರುವ ಭಾರತೀಯರನ್ನು ರಕ್ಷಣೆ ಕೂಡ ಇರಾಕ್ ಸೈನಿಕರ ವ್ಯಾಪ್ತಿಯನ್ನು ಮೀರಿ ನಿಂತಿದ್ದು, ಮಿಲಿಟರಿಯೇತರ ಕಾರ್ಯಾಚರಣೆಯಿಂದಷ್ಟೇ ಭಾರತೀಯರ ರಕ್ಷಣೆ ಸಾಧ್ಯ.
ಆದರೆ ಬಂಡುಕೋರರ ವಿರುದ್ಧ ವೈಮಾನಿಕ ದಾಳಿ ನಡೆಸಲು ಮುಂದಾಗಿದ್ದ ಅಮೆರಿಕ ಅಧ್ಯಕ್ಷ ಒಬಾಮ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಇರಾಕ್ ಸಂಘರ್ಷಕ್ಕೆ ಕುರಿತಂತೆ ವಿಶ್ವಸಂಸ್ಥೆಯ ಅಧ್ಯಕ್ಷ ಬಾನ್ ಕಿ ಮೂನ್ ಅವರು ನೀಡಿದ್ದ ಸಲಹೆಯ ಮೇರೆಗೆ ತಮ್ಮ ಸೈನಿಕ ಕಾರ್ಯಾಚರಣೆಯ ನಿರ್ಧಾರವನ್ನು ಕೂಡ ಅವರು ಹಿಂಪಡೆದಿದ್ದಾರೆ. ಆದರೆ ಇರಾಕ್ ಸರ್ಕಾರಕ್ಕೆ ಮತ್ತು ಅಲ್ಲಿನ ಜನರಿಗೆ ಉಗ್ರರ ವಿರುದ್ಧ ಹೋರಾಡಲು ಬಾಹ್ಯ ಬೆಂಬಲ ನೀಡುವುದಾಗಿ ಅವರು ಹೇಳಿದ್ದಾರೆ.
ಆದರೆ ಒಂದಷ್ಟು ಸ್ಪಷ್ಟ ತನ್ನ ವಶದಲ್ಲಿರುವ ಭಾರತೀಯರನ್ನು ಹತ್ಯೆಗೈಯ್ಯುವ ದುಸ್ಸಾಹಸಕ್ಕೆ ಇಸಿಸ್ ಸಂಘಟನೆ ಏನಾದರೂ ಕೈಹಾಕಿದರೆ, ಅದು ಅಂತಾರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ತುತ್ತಾಗಬೇಕಾಗುತ್ತದೆ. ಪ್ರಸ್ತುತ ಸಂಘರ್ಷ ಇರಾಕ್‌ನ ಆಂತರೀಕ ಕಲಹವಾಗಿದ್ದು, ಅನ್ಯ ದೇಶದ ನಾಗರೀಕರ ಹತ್ಯೆ ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಡಲಿದೆ. ಈ ವಿಚಾರ ಇಸಿಸ್ ಸಂಘಟನೆಗೂ ತಿಳಿದಿದ್ದು, ಭಾರತೀಯರನ್ನು ಹತ್ಯೆಗೈಯ್ಯುವ ಮೂರ್ಖತನಕ್ಕೆ ಅದು ಕೈ ಹಾಕಲಾರದು ಎಂದಷ್ಟೇ ಹೇಳಬಹುದು.