ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಕ್ಯಾಂಪಕೋಲಾ' ಅಕ್ರಮ ಫ್ಲಾಟ್‌ಗಳ ತೆರವಿಗೆ ಸಮ್ಮತಿಸಿದ ನಿವಾಸಿಗಳು

ಮುಂಬೈ ಹೈಡ್ರಾಮಕ್ಕೆ ತೆರೆಬಿದಿದ್ದು, ಅಕ್ರಮ ಫ್ಲಾಟ್‌ಗಳ ತೆರವು ಕಾರ್ಯಾಚರಣೆಗೆ ಕ್ಯಾಂಪಕೋಲಾ ವಸತಿ ಸಮುಚ್ಚಯದ ನಿವಾಸಿಗಳು ಭಾನುವಾರ ಒಪ್ಪಿಗೆ ಸೂಚಿಸಿದ್ದಾರೆ.

Srinivasa Murthy VN
Updated On : 22 Jun 2014, 5:56 am

ಮುಂಬೈ: ಕಳೆದ 3 ದಿನಗಳಿಂದ ಮುಂಬೈನಲ್ಲಿ ನಡೆಯುತ್ತಿದ್ದ ಹೈಡ್ರಾಮಕ್ಕೆ ತೆರೆಬಿದಿದ್ದು, ಅಕ್ರಮ ಫ್ಲಾಟ್‌ಗಳ ತೆರವು ಕಾರ್ಯಾಚರಣೆಗೆ ಕ್ಯಾಂಪಕೋಲಾ ವಸತಿ ಸಮುಚ್ಚಯದ ನಿವಾಸಿಗಳು ಭಾನುವಾರ ಒಪ್ಪಿಗೆ ಸೂಚಿಸಿದ್ದಾರೆ.

3ದಿನಗಳಿಂದ ಅಕ್ರಮ ಫ್ಲಾಟ್‌ಗಳ ತೆರವಿಗೆ ನಿವಾಸಿಗಳ ಮನವೊಲಿಕೆ ಮಾಡುತ್ತಿದ್ದ ಬಿಎಂಸಿ ಅಧಿಕಾರಿಗಳ ಯತ್ನಕ್ಕೆ ಇಂದು ಫಲದೊರೆತಿದೆ. ಸುಪ್ರೀಂಕೋರ್ಟ್‌ನ ಆದೇಶದ ಹೊರತಾಗಿಯೂ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದ ನಿವಾಸಿಗಳು, ತಮ್ಮ ಪ್ರತಿಭಟನೆಯಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಮನಗಂಡಿದ್ದು ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ. ನಾಳೆಯಿಂದಲೇ ಅಧಿಕಾರಿಗಳು ಅಕ್ರಮ ಫ್ಲಾಟ್‌ಗಳ ತೆರವು ಕಾರ್ಯಾಚರಣೆ ನಡೆಸಲಿದ್ದಾರೆ.

2005ರಿಂದಲೂ ನ್ಯಾಯಾಲಯದಲ್ಲಿ 'ಕ್ಯಾಂಪಾಕೋಲಾ' ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸೊಸೈಟಿಯ ಅಧಿಕಾರಿಗಳು ಪಾಲಿಕೆಗೆ ನೀಡಿದ್ದ ಮೂಲನಕ್ಷೆಯನ್ನು ತಿರುಚಿ ಹೆಚ್ಚುವರಿ ಫ್ಲಾಟ್‌ಗಳನ್ನು ನಿರ್ಮಿಸಿದ್ದರು. ಇದರಲ್ಲಿ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೂಡ ಶಾಮೀಲಾಗಿದ್ದರು ಎಂದು ಹೇಳಲಾಗುತ್ತಿದೆ. 1989ರಲ್ಲಿ ನಿರ್ಮಿಸಲ್ಪಟ್ಟಿದ್ದ ಈ ವಸತಿ ಸಮುಚ್ಚಯಕ್ಕೆ ಮುಂಬೈ ಮಹಾನಗರ ಪಾಲಿಕೆ ಕೇವಲ 5 ಅಂತಸ್ತುಗಳಿಗೆ ಮಾತ್ರ ಅನುಮತಿ ನೀಡಿತ್ತು. ಆದರೆ 'ಕ್ಯಾಂಪಾಕೋಲಾ' ಸೊಸೈಟಿ ಅಧಿಕಾರಿಗಳು ಮೂಲನಕ್ಷೆಯನ್ನು ತಿರುಚಿ ಅಕ್ರಮವಾಗಿ 35 ಅಂತಸ್ತುಗಳನ್ನು ನಿರ್ಮಿಸಿದ್ದರು.

ಇದೀಗ ಈ ವಸತಿ ಸಮುಚ್ಚಯದಲ್ಲಿರುವ 2ಕಟ್ಟಡಗಳಲ್ಲಿ ಒಟ್ಟು 45 ಅಂತಸ್ತುಗಳಿದ್ದು, ಹೆಚ್ಚುವರಿಯಾಗಿ ಸುಮಾರು 107 ಫ್ಲಾಟ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಈಗ ಸುಮಾರು 500 ಕ್ಕೂ ಅಧಿಕ ನಿವಾಸಿಗಳು ವಾಸವಾಗಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳೆದ ಫೆಬ್ರವರಿ 17ರಂದು ತೀರ್ಪು ನೀಡಿದ್ದು, ಮೇ 31ರೊಳಗೆ ಜಾಗ ಖಾಲಿ ಮಾಡುವಂತೆ ನಿವಾಸಿಗಳಿಗೆ ಗಡುವು ನೀಡಿತ್ತು. ಹೀಗಾಗಿ ನ್ಯಾಯಾಲಯ ನೀಡಿದ್ದ ಗಡುವು ಮುಗಿದ ಹಿನ್ನಲೆಯಲ್ಲಿ ಬಿಎಂಸಿ ಅಧಿಕಾರಿಗಳು ಕಟ್ಟಡ ತೆರವಿಗೆ ಮುಂದಾಗಿದ್ದರು.

ಕ್ಯಾಂಪಕೋಲಾದಲ್ಲಿದೆ 'ಲತಾ ಮಂಗೇಶ್ಕರ್‌' ಫ್ಲಾಟ್
ಇದೇ ಕ್ಯಾಂಪಕೋಲಾ ವಸತಿ ಸಂಕೀರ್ಣದಲ್ಲಿ ಖ್ಯಾತ ಹಿನ್ನಲೆಗಾಯಕಿ ಮತ್ತು ಭಾರತ ರತ್ನ ಪ್ರಶಸ್ತಿ ವಿಜೇತೆ ಲತಾ ಮಂಗೇಶ್ಕರ್ ಅವರು ಕೂಡ ಒಂದು ಫ್ಲಾಟ್ ಹೊಂದಿದ್ದರು ಎಂದು ತಿಳಿದುಬಂದಿದೆ. ಆದರೆ ಪ್ರಸ್ತುತ ತೆರವು ಕಾರ್ಯಾಚರಣೆಗೆ ಒಳಗಾಗುತ್ತಿರುವ ಫ್ಲಾಟ್‌ಗಳ ಪಟ್ಟಿಯಲ್ಲಿ ಲತಾ ಅವರ ಫ್ಲಾಟ್ ಇದೇಯೋ ಇಲ್ಲವೋ ಎಂಬುದರ ಕುರಿತು ವರಿದಿಯಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement