ತಿರುಗಿಬಿದ್ದ ಇರಾಕ್; ಬಂಡುಕೋರರ ವಿರುದ್ಧ ವೈಮಾನಿಕ ದಾಳಿ, 19 ಸಾವು
ಬಂಡುಕೋರರ ಹಾವಳಿಯಿಂದಾಗಿ ಬೇಸತ್ತಿದ್ದ ಇರಾಕ್ ಸರ್ಕಾರ..
ಬಾಗ್ದಾದ್: ಬಂಡುಕೋರರ ಹಾವಳಿಯಿಂದಾಗಿ ಬೇಸತ್ತಿದ್ದ ಇರಾಕ್ ಸರ್ಕಾರ ಮಂಗಳವಾರ ಉಗ್ರರ ವಿರುದ್ಧ ತಿರುಗಿ ಬಿದಿದ್ದು, ಉಗ್ರರ ವಿರುದ್ಧ ವೈಮಾನಿಕ ಕಾರ್ಯಾಚರಣೆಗೆ ಚಾಲನೆ ನೀಡಿದೆ.
ಉಗ್ರರ ಹಿಡಿತದಲ್ಲಿದ್ದ ಬೈಜಿ ಪ್ರದೇಶದಲ್ಲಿ ವೈಮಾನಿಕ ದಾಳಿ ನಡೆಸಿದ ಇರಾಕ್ ಮಿಲಿಟರಿ ಪಡೆ ಒಟ್ಟು 19 ಉಗ್ರರನ್ನು ಸದೆಬಡೆಯುವಲ್ಲಿ ಯಶಸ್ವಿಯಾಗಿದ್ದು, ಘಟನೆಯಲ್ಲಿ 17 ಮಂದಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇಂದು ಬೆಳಗಿನಿಂದಲೇ ಇರಾಕ್ ಮಿಲಿಟರಿ ಪಡೆಗಳ ಸೈನಿಕರು ವೈಮಾನಿಕ ದಾಳಿಯಲ್ಲಿ ತೊಡಗಿದ್ದು, ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇನ್ನು ಸುನ್ನಿ ಬಂಡುಕೋರರ ವಶದಲ್ಲಿದ್ದ ಅಲ್ ವಲೀದ್ ಗಡಿ(ಇರಾಕ್ ಮತ್ತು ಸಿರಿಯಾ ನಡುವಿನ ಪ್ರಮುಖ ಗಡಿ ಪ್ರದೇಶ)ಯನ್ನು ಕೂಡ ಇರಾಕ್ ಮಿಲಿಟರಿ ನಿನ್ನೆ ವಶಪಡಿಸಿಕೊಂಡಿದ್ದು, ಬಂಡುಕೋರರು ಯಾವುದೇ ಪ್ರತಿರೋಧ ಒಡ್ಡದೇ ಸೈನಿಕರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಜಾನ್ ಕೆರ್ರಿ ಮತ್ತು ನ್ಯಾಟೋ ಅಧಿಕಾರಿಗಳ ಭೇಟಿ
ಇರಾಕ್‌ನ ಆಂತರಿಕ ಬಿಕ್ಕಟ್ಟು ತಾರಕ್ಕೇರಿರುವಂತೆಯೇ ಇಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಮತ್ತು ನ್ಯಾಟೋ ಅಧಿಕಾರಿಗಳು ಇರಾಕ್ ಮಿಲಿಟರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ವಿಶೇಷ ವಿಮಾನದಲ್ಲಿ ಬೆಳಗ್ಗೆ 11.50ಕ್ಕೆ ಇರಾಕ್‌ನ ಖುರ್ದಿಶ್ ನಗರಕ್ಕೆ ಆಗಮಿಸಿದ ಜಾನ್ ಕೆರ್ರಿ ಅವರು ಇರಾಕ್ ಮಿಲಿಟರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಅತ್ತ ಜಾನ್ ಖುರ್ದಿಶ್‌ನಲ್ಲಿ ಜಾನ್ ಕೆರ್ರಿ ಅವರು ಮಾತುಕತೆ ನಡೆಸುತ್ತಿದ್ದರೆ ಇತ್ತ ಅಂತಾರಾಷ್ಟ್ರೀಯ ಮಿಲಿಟರೆ ಪಡೆ ನ್ಯಾಟೋ ಇರಾಕ್ ಸಂಘರ್ಷವನ್ನು ಕುತೂಹಲದಿಂದ ವೀಕ್ಷಿಸುತ್ತಿದೆ. ಇರಾಕ್‌ನ ಆಂತರಿಕ ಕಲಹಲ್ಲಿ ನ್ಯಾಟೋ ಪಾತ್ರವಹಿಸುವುದಿಲ್ಲ ಎಂದು ಹೇಳಿರುವ ನ್ಯಾಟೋ ಮುಖ್ಯಸ್ಥ ಆಂಡರ್ ಫಾಘ್ ರಸ್ಮುಸ್ಸೆನ್ ಅವರು, ಸರ್ಕಾರಕ್ಕೆ ಮಿಲಿಟರಿಯೇತರ ಬೆಂಬಲ ನೀಡಲು ತಾವು ಸಿದ್ಧ ಎಂದು ಹೇಳಿದ್ದಾರೆ.
ಸ್ವದೇಶಕ್ಕೆ ವಾಪಸಾದ ಇಬ್ಬರು ಭಾರತೀಯರು
ಇರಾಕ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದ ಇಬ್ಬರು ಭಾರತೀಯರು ಇಂದು ಸ್ವದೇಶಕ್ಕೆ ವಾಪಸಾಗಿದ್ದು, ಇರಾಕ್‌ನ ಬರ್ಸಾ ನಗರದಲ್ಲಿ ಮರಮುಟ್ಟು ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದ ಬಿಸ್ವಜಿತ್ ಸಿಂಗ್ ಮತ್ತು ಮಾಣಿಕ್ ಸರ್ಕಾರ್ ಎಂಬುವವರು ಇಂದು ಭಾರತಕ್ಕೆ ವಾಪಸಾಗಿದ್ದಾರೆ. ಇಬ್ಬರು ಕೂಡ ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ತೆಹಟ್ಟಾ ಗ್ರಾಮದವರೆಂದು ತಿಳಿದುಬಂದಿದೆ.
ಸ್ವದೇಶಕ್ಕೆ ಮರಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಣಿಕ್ ಸರ್ಕಾರ್, 'ನಾವು ತಂಗಿದ್ದ ಬರ್ಸಾ ಜಿಲ್ಲೆಯಲ್ಲಿ ಯಾವುದೇ ಉಗ್ರಗಾಮಿ ದಾಳಿಗಳು ಸಂಭವಿಸಿರಲಿಲ್ಲ. ಆದರೆ ನಾವಿದ್ದ ಸ್ಥಳದಿಂದ 15 ಕಿ.ಮೀ ದೂರದಲ್ಲಿ ಉಗ್ರಗಾಮಿಗಳು ದಾಳಿ ನಡೆಸುತ್ತಿದ್ದರು. ನಮ್ಮ ರಕ್ಷಣೆಗಾಗಿ ಇರಾಕ್ ಮಿಲಿಟರಿ ಪಡೆಗಳು ಉಗ್ರರೊಂದಿಗೆ ಗುಂಡಿನ ಚಕಮಕಿಯಲ್ಲಿ ತೊಡಗಿತ್ತು. ಉಗ್ರರು ಭಾರತೀಯರನ್ನು ಅಪಹರಿಸಿದ ಬಳಿಕ ಸರ್ಕಾರ ಇರಾಕ್‌ನಲ್ಲಿರುವ ಎಲ್ಲ ಭಾರತೀಯರಿಗೆ ರಕ್ಷಣೆ ಒದಗಿಸಿತ್ತು. ಅಲ್ಲದೆ ನಾವು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲೀಕರು ಚರ್ಚೆ ನಡೆಸಿ, ನಮ್ಮನ್ನು ಭಾರತಕ್ಕೆ ವಾಪಸ್ ಕಳುಹಿಸುವ ನಿರ್ಧಾರ ಕೈಗೊಂಡು ವಿಶೇಷ ವಿಮಾನದಲ್ಲಿ ನಮ್ಮನ್ನು ಭಾರತಕ್ಕೆ ಕಳುಹಿಸಿಕೊಟ್ಟರು ಎಂದು ಹೇಳಿದರು.
ಒಟ್ಟಾರೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಇರಾಕ್ ಸಂಘರ್ಷ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಸುನ್ನಿ ಬಂಡುಕೋರರ ವಿರುದ್ಧ ಇರಾಕ್ ಮಿಲಿಟರಿ ಪಡೆ ತಿರುಗಿಬಿದ್ದಿದೆ.