ಪರಿಷತ್ ನಾಮ ನಿರ್ದೇಶನ: ರಾಜ್ಯಪಾಲರ ಮೇಲೆ ಸಿದ್ದು ಒತ್ತಡ!
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಭವನಕ್ಕೆ ತೆರಳಿದ್ದು, ಮೇಲ್ಮನೆ ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ರಾಜಭವನಕ್ಕೆ ತೆರಳಿದ್ದು, ವಿಧಾನಪರಿಷತ್ಗೆ ನಾಮನಿರ್ದೇಶನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯಪಾಲ ಹಂಸರಾಜ್ ಭರದ್ವಾಜ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಈ ಹಿಂದೆ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ್ದ ಪಟ್ಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ, ರಾಜ್ಯಪಾಲರನ್ನು ಕಂಡು ತನ್ನ ಅಸಮಾಧನಾವನ್ನು ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿರುವವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದು, ಅವರನ್ನು ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬಾರದು ಎಂದು ಆಗ್ರಹಿಸಿತ್ತು. ಅಲ್ಲದೆ ರಾಜ್ಯ ಸರ್ಕಾರದ ಶಿಫಾರಸ್ಸಿಗೆ ಅಂಕಿತ ಹಾಕಬಾರದು ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರ ನೇತೃತ್ವದ ತಂಡ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಲ್ಲಿ ಮನವಿ ಮಾಡಿತ್ತು.
ಇದೇ 29ರಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ನಿವೃತ್ತರಾಗಲಿದ್ದು, ನಂತರ ಕೇಂದ್ರದ ಎನ್ಡಿಎ ಸರ್ಕಾರ ಸೂಚಿಸುವವರೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹೀಗಾಗಿ ಈ ಚಿಕ್ಕ ಕಾಲಾವಕಾಶದೊಳಗೇ ಪರಿಷತ್ ನಾಮನಿರ್ದೇಶನ ಪಟ್ಟಿಗೆ ಅಂಕಿತ ಹಾಕಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಹವಣಿಸುತ್ತಿದೆ.
ಪ್ರಸ್ತುತ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿರುವವರ ಪೈಕಿ ಬಹುತೇಕರು ಸಕ್ರಿಯ ರಾಜಕಾರಣಿಗಳಾಗಿದ್ದು, ಇವರನ್ನು ಮೇಲ್ಮನೆಗೆ ಆಯ್ಕೆ ಮಾಡಬಾರದು ಎಂಬುದು ಬಿಜೆಪಿ ವಾದ. ಈ ಹಿಂದೆಯೂ ಕೂಡ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಸೋಮಣ್ಣ ಅವರ ಹೆಸರನ್ನು ಸರ್ಕಾರ ಶಿಫಾರಸ್ಸು ಮಾಡಿತ್ತು. ಆದರೆ ಆಗ ರಾಜ್ಯಪಾಲರಾಗಿದ್ದ ಇದೇ ಹಂಸರಾಜ್ ಭಾರದ್ವಾಜ್ ಅವರು ಸೋಮಣ್ಣ ಅವರ ಹೆಸರನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದರು. ಸೋಮಣ್ಣ ಅವರನ್ನು ಯಾವ ಮಾನದಂಡದ ಮೇಲೆ ಮೇಲ್ಮನೆಗೆ ತಿರಸ್ಕರಿಸಲಾಯಿತೋ ಅದೇ ಮಾನದಂಡದಲ್ಲೇ ಪ್ರಸ್ತುತ ಶಿಫಾರಸ್ಸು ಪಟ್ಟಿಯನ್ನು ವೀಕ್ಷಿಸುವಂತೆ ಬಿಜೆಪಿ ಮನವಿ ಮಾಡಿಕೊಂಡಿದೆ.
ಪ್ರಸ್ತುತ ರಾಜ್ಯ ಸರ್ಕಾರ ಸಿದ್ಧಪಡಿಸಿಕೊಂಡಿರುವ ಪಟ್ಟಿಗೆ ಸ್ವತಃ ರಾಜ್ಯಪಾಲ ಹಂಸರಾಜ್ ಭರದ್ವಾಜ್ ಅವರು ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತಂತೆ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖುದ್ದು ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ಆಗಮಿಸಿದ್ದು, ಅವರೊಂದಿಗೆ ಪರಿಷ್ಕೃತ ಪಟ್ಟಿಯನ್ನು ಹೊತ್ತು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರದ ಪಟ್ಟಿಯಲ್ಲಿ ಕೊಂಚ ಬದಲಾವಣೆಗಳಾಗಿದ್ದು, ಪಟ್ಟಿಯಲ್ಲಿ ಶಾಂತಕುಮಾರ್ ಅವರ ಬದಲಿಗೆ ಐವಿನ್ ಡಿಸೋಜಾ ಅವರ ಹೆಸರನ್ನು ಸೇರಿಸಲಾಗಿದೆ. ಅಲ್ಲದೆ ಹೊಸದಾಗಿ ಚಿತ್ರನಟಿ ಜಯಮಾಲ ಅವರ ಹೆಸರನ್ನೂ ಸೇರ್ಪಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಉಳಿದಂತೆ ಉಗ್ರಪ್ಪ, ಅಬ್ದುಲ್ ಜಬ್ಬಾರ್ ಅವರ ಹೆಸರುಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದೇ 29ರಂದು ರಾಜ್ಯಪಾಲ ಹಂಸರಾಜ್ ಭರದ್ವಾಜ್ ಅವರು ನಿವೃತ್ತರಾಗಲಿರುವುದರಿಂದ ರಾಜ್ಯಸರ್ಕಾರದ ಪರಿಷ್ಕತ ಪಟ್ಟಿಗೆ ಅಂಗೀಕಾರ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒತ್ತಡ ಹೇರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.