ರೈಲ್ವೇ ಪ್ರಯಾಣ ದರ ಏರಿಕೆ: ಎನ್ ಡಿಎ ಸಂಸದರಿಂದಲೇ ವಿರೋಧ
ಕೇಂದ್ರ ಸರ್ಕಾರದ ರೈಲು ದರ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ಬಿಜೆಪಿಯ ಕೆಲ ಸಂಸದರು ಸೇರಿದಂತೆ ಎನ್ ಡಿಎ ಮೈತ್ರಿಕೂಟದ ಅಂಗಪಕ್ಷವಾದ ಶಿವಸೇನೆಯ ಕೆಲ ಸಂಸದರು ಮನವಿ ಮಾಡಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರದ ರೈಲು ದರ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ಬಿಜೆಪಿಯ ಕೆಲ ಸಂಸದರು ಸೇರಿದಂತೆ ಎನ್ ಡಿಎ ಮೈತ್ರಿಕೂಟದ ಅಂಗಪಕ್ಷವಾದ ಶಿವಸೇನೆಯ ಕೆಲ ಸಂಸದರು ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ ನವದೆಹಲಿಯಲ್ಲಿ ರೇಲ್ವೇ ಸಚಿವ ಸದಾನಂದಗೌಡ ಅವರನ್ನು ಭೇಟಿ ಮಾಡಿದ ಬಿಜೆಪಿ ಮತ್ತು ಶಿವಸೇನೆ ಸಂಸದರು, ರೈಲ್ವೇ ಪ್ರಯಾಣ ದರ ಏರಿಕೆ ಪ್ರಮಾಣದಲ್ಲಿ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮೇಲೂ ರೈಲ್ವೆ ದರ ಏರಿಕೆ ನಿರ್ಧಾರ ಪರಿಣಾಮ ಬೀರಬಹುದು ಎಂದು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಸದಾನಂದಗೌಡ ಅವರು ಕೂಡ ಸಂಸದರ ಪ್ರಸ್ತಾಪಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಾರಾಷ್ಟ್ರದ ಬಿಜೆಪಿ ಸಂಸದ ಕಿರಿಟ್ ಸೋಮಯ್ಯ ಅವರು, ರೇಲ್ವೇ ಪ್ರಯಾಣ ದರವನ್ನು ಇಳಿಕೆ ಮಾಡುವ ಪ್ರಸ್ತಾಪಕ್ಕೆ ಸದಾನಂದಗೌಡ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದರು.
ಕಳೆದ ಶುಕ್ರವಾರ ರೈಲು ಪ್ರಯಾಣದರದಲ್ಲಿ ಶೇ.14.2ರಷ್ಟು ಏರಿಕೆ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವಿರೋಧ ಕೇಳಿಬಂದಿತ್ತು. ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಕೇಂದ್ರದ ಎನ್ಡಿಎ ಸರ್ಕಾರದ ವಿರುದ್ಧ ಕಿಡಿಕಾರಿದ್ದವು. ಆದರೆ ಇವಾವುದಕ್ಕೂ ಕಿವಿಗೊಡದ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿತ್ತು. ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಎನ್ಡಿಎ ಸರ್ಕಾರದ ಪ್ರಮುಖ ಸಚಿವರು ಸರ್ಕಾರದ ಬೆಲೆ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.