ಹಿಟ್ ಅಂಡ್ ರನ್ ಕೇಸ್: ಗೊಂದಲ ಮೂಡಿಸುತ್ತಿರುವ ಸಾಕ್ಷಿಗಳು
ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಸಾಕ್ಷಿಗಳು ನೀಡುತ್ತಿರುವ ಹೇಳಿಕೆಗಳು ಗೊಂದಲ ಮೂಡಿಸುತ್ತಿದ್ದು, ಪೊಲೀಸರ ಬಳಿ ದಾಖಲಿಸಿರುವ ಹೇಳಿಕೆಗಳಿಗೂ, ನ್ಯಾಯಾಲಯದಲ್ಲಿ..
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣ ಸಂಬಂಧ ಸಾಕ್ಷಿಗಳು ನೀಡುತ್ತಿರುವ ಹೇಳಿಕೆಗಳು ಗೊಂದಲ ಮೂಡಿಸುತ್ತಿದ್ದು, ಪೊಲೀಸರ ಬಳಿ ದಾಖಲಿಸಿರುವ ಹೇಳಿಕೆಗಳಿಗೂ, ನ್ಯಾಯಾಲಯದಲ್ಲಿ ದಾಖಲಿಸುತ್ತಿರುವ ಹೇಳಿಕೆಗಳಿಗೂ ಸಂಬಂಧವೇ ಇಲ್ಲದಂತಾಗಿದೆ.
ಪ್ರಕರಣ ಸಂಬಂಧ ಈ ಹಿಂದೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದ ರೆಸ್ಟೋರೆಂಟ್ ಮ್ಯಾನೆಜರ್, 'ಅಪಘಾತ ಸ್ಥಳದಲ್ಲಿ ಸಲ್ಮಾನ್ ಖಾನ್ ಇದದ್ದು ನಿಜ, ಆದರೆ ಅವರು ಕುಡಿದಿದ್ದರೋ ಇಲ್ಲವೋ ಎಂಬುದು ನನಗೆ ತಿಳಿದಿಲ್ಲ' ಎಂದು ಹೇಳಿಕೆ ನೀಡಿದ್ದರು. ಆದರೆ ಇದೇ ಮ್ಯಾನೇಜರ್ ಪೊಲೀಸರ ಬಳಿ ಸಾಕ್ಷ್ಯ ನುಡಿಯುವಾಗ 'ಅಪಘಾತ ಸ್ಥಳದಲ್ಲಿದ್ದ ದೊಡ್ಡ ಕಾರಿನ ಚಾಲಕನ ಸೀಟ್‌ನಲ್ಲಿ ಸಲ್ಮಾನ್ ಖಾನ್ ಇದ್ದರು. ಆ ಸಂದರ್ಭದಲ್ಲಿ ಅವರು ಪಾನಮತ್ತರಾಗಿದ್ದರು ಎಂದು ಹೇಳಿಕೆ ನೀಡಿದ್ದರು.
ಇಂತಹುದೇ ಗೊಂದಲದ ಮತ್ತೊಂದು ಹೇಳಿಕೆಯೊಂದು ಇಂದು ನ್ಯಾಯಾಲಯದಲ್ಲಿ ದಾಖಲಾಗಿದ್ದು, ಅಪಘಾತ ನಡೆದ ಸ್ಥಳದ ಸಮೀಪವಿರುವ ನೀಲ್‌ಸಾಗರ್ ರೆಸ್ಟೋರೆಂಟ್‌ನ ಕಾವಲುಗಾರ ಹೇಳಿಕೆ ನೀಡಿದ್ದಾನೆ. ಈ ಹಿಂದೆ ಪೊಲೀಸ್ ವಿಚಾರಣೆ ವೇಳೆ ಆತ, 'ಅಪಘಾತಕ್ಕೀಡಾದ ಕಾರಿನ ಚಾಲಕನ ಸೀಟಿನಿಂದ ಸಲ್ಮಾನ್ ಖಾನ್ ಅವರು ಕೆಳಗಿಳಿದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದರು ಎಂದು ಹೇಳಿಕೆ ನೀಡಿದ್ದನು. ಆದರೆ ಇಂದು ನ್ಯಾಯಾಲಯದಲ್ಲಿ ಆತ ಉಲ್ಟಾಹೊಡೆದಿದ್ದು, ವಿಚಾರಣೆ ವೇಳೆ ಆತ ಘಟನೆಯನ್ನು ವಿವರಿಸಲು ಕೊಂಚ ಎಡವುತಿದ್ದನು. ಬಳಿಕ ಹೇಳಿಕೆ ನೀಡಿದ ಆತ 'ದೊಡ್ಡ ಕಾರೊಂದು ಫುಟ್‌ಬಾತ್ ಮೇಲೆ ವೇಗವಾಗಿ ಸಂಚರಿಸಿ, ಗೂಡಂಗಡಿಗಳ ಮೇಲೆ ಹರಿಯಿತು ಎಂದಷ್ಟೇ ಹೇಳಿದ್ದಾನೆ.
ಈ ಕುರಿತು ಕೂಡಲೇ ಎಚ್ಚೆತ್ತ ಸರ್ಕಾರಿ ಪರ ವಕೀಲ ಜಗನ್ನಾಥ್ ಕೆನ್ರಾಲ್‌ಕರ್ ಅವರು ಸೆಕ್ಯೂರಿಟಿ ಗಾರ್ಡ್‌ನನ್ನು ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಬೇಕು ಎಂದು ನ್ಯಾಯಾಧೀಶರನ್ನು ಮನವಿ ಮಾಡಿದರು. ಈ ಹಿಂದೆ ಇದೇ ಸೆಕ್ಯೀರಿಟಿ ಗಾರ್ಡ್‌ನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು. ಇದೇ ವೇಳೆ ತಮ್ಮ ವಾದ ಮಂಡಿಸಿದ ಸಲ್ಮಾನ್ ಖಾನ್ ಪರ ವಕೀಲರಾದ ಶ್ರೀಕಾಂತ್ ಶಿವಾಡೆ ಅವರು ಘಟನೆ ವೇಳೆ ಸೆಕ್ಯೂರಿಟಿ ಗಾರ್ಡ್, ರೆಸ್ಟೋರೆಂಟ್ ಗೇಟ್ ಬಳಿ ತನ್ನ ಕೆಲಸದಲ್ಲಿ ನಿರತನಾಗಿದ್ದು. ಘಟನಾ ಸ್ಥಳದ ಎದುರುಗಡೆ ಬೇಕರಿ ಮತ್ತು ಲಾಂಡ್ರಿ (ಇಸ್ತ್ರಿ ಅಂಗಡಿ)ಶಾಪ್ ಇದೆ. ಅದರ ಪಕ್ಕದಲ್ಲಿ ರೆಸ್ಟೋರೆಂಟ್ ಇದೆ. ಹೀಗಾಗಿ ಆತ ಘಟನಾ ಸ್ಥಳಕ್ಕೆ ಆಗಮಿಸಿ ಅಪಘಾತವನ್ನು ವೀಕ್ಷಿಸಲು ಸಾಧ್ಯವಿರಲಿಲ್ಲ ಎಂದು ತಮ್ಮ ವಾದವನ್ನು ಮಂಡಿಸಿದರು.
ಮತ್ತೊಂದು ಪ್ರಮುಖ ಸಾಕ್ಷಿ ಮತ್ತು ಘಟನೆಯಲ್ಲಿ ಗಾಯಗೊಂಡಿದ್ದ ಎಂ.ಶೇಖ್ ಎಂಬುವವರು, ಅಪಘಾತದ ನಂತರ ನನ್ನನ್ನು ಹೊರಗೆ ಎಳೆದಾಗ ದೊಡ್ಡದೊಂದು ಬಿಳಿ ಬಣ್ಣದ ಕಾರು ನಿಂತಿತ್ತು. ಕಾರಿನ ಪಕ್ಕದಲ್ಲಿಯೇ ನಟ ಸಲ್ಮಾನ್ ಖಾನ್ ಮತ್ತು ಇಬ್ಬರು ವ್ಯಕ್ತಿಗಳು ನಿಂತಿದ್ದರು ಎಂದು ಹೇಳಿಕೆ ನೀಡಿದ್ದರು. ಆದರೆ ನ್ಯಾಯಲದಲ್ಲಿ ಹೇಳಿಕೆ ನೀಡುವಾಗ ಅವರ ಹೇಳಿಕೆ ಕೊಂಚ ಭಿನ್ನವಾಗಿತ್ತು. ನನ್ನನ್ನು ಅಪಘಾತದ ನಂತರ ಹೊರಗೆಳೆದಾಗ ಸಲ್ಮಾನ್ ಖಾನ್ ಕೂಡ ಅಲ್ಲಿಯೇ ನಿಂತಿದ್ದರು. ಅವರೊಂದಿಗೆ ಗುರುತು ತಿಳಿಯದ ಇಬ್ಬರು ವ್ಯಕ್ತಿಗಳು ನಿಂತಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಒಟ್ಟಾರೆ 2002ರ ಸೆಪ್ಟೆಂಬರ್‌ನಲ್ಲಿ ಮುಂಬೈನಲ್ಲಿ ನಡೆದಿದ್ದ ಅಪಘಾತ ಪ್ರಕರಣ ಮತ್ತು ಪ್ರಕರಣದಲ್ಲಿನ ಸಾಕ್ಷಿಗಳ ಹೇಳಿಕೆ ಗೊಂದಲ ಮೂಡಿಸುತ್ತಿದ್ದು, ನ್ಯಾಯಾಲಯಕ್ಕೆ ಸವಾಲಾಗಿ ಪರಿಣಮಿಸಿವೆ.