ಬಿಕ್ಕಟ್ಟು ಶಮನಕ್ಕೆ ದೆಹಲಿ ವಿವಿ ಪ್ರಸ್ತಾಪ
ಬಿ.ಟೆಕ್ ವಿಷಯವನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳನ್ನು ಮೂರು ವರ್ಷ..
ನವದೆಹಲಿ: ನಾಲ್ಕು ವರ್ಷಗಳ ಪದವಿ ಪೂರ್ವ ಶೈಕ್ಷಣಿಕ ಕಾರ್ಯಕ್ರಮ ಕುರಿತ ಬಿಕ್ಕಟ್ಟು ಶಮನಕ್ಕೆ ದೆಹಲಿ ವಿಶ್ವವಿದ್ಯಾಲಯ ಮುಂದಾಗಿದ್ದು, ವಿಶ್ವವಿದ್ಯಾಲಯ ಅನುದಾನ ಆಯೋಗ ಯುಜಿಸಿ ಮುಂದೆ ಹೊಸ ಪ್ರಸ್ತಾಪವನ್ನು ಮುಂದಿಟ್ಟಿದೆ.
ದೆಹಲಿ ವಿವಿಗೆ ಯುಜಿಸಿ ನೀಡಿದ್ದ ನಿರ್ದೇಶನಕ್ಕೆ ಸಂಬಂಧಿಸಿದಂತೆ ಇಂದು ದೆಹಲಿ ವಿಶ್ವವಿದ್ಯಾಲಯ ನೂತನ ಪ್ರಸ್ತಾಪವೊಂದನ್ನು ಯುಜಿಸಿ ಮುಂದಿಟ್ಟಿದೆ. ಯುಜಿಸಿಗೆ ದೆಹಲಿ ವಿವಿ ಕಳುಹಿಸಿಕೊಟ್ಟಿರುವ ಪ್ರಸ್ತಾಪದಲ್ಲಿ ಬಿ.ಟೆಕ್ ವಿಷಯವನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳನ್ನು ಮೂರು ವರ್ಷಗಳ ಪದವಿ ಶಿಕ್ಷಣ ಕಾರ್ಯಕ್ರಮವಾಗಿ ಮುಂದುವರೆಸಲು ನಮಗೆ ಅಭ್ಯಂತರವೇನೂ ಇಲ್ಲ ಎಂದು ಹೇಳಿದೆ. ಆದರೆ ಬಿ.ಟೆಕ್ ವಿಷಯವನ್ನು ಮಾತ್ರ ನಾಲ್ಕು ವರ್ಷಗಳ ಶೈಕ್ಷಣಿಕ ಕಾರ್ಯಕ್ರಮವಾಗಿ ಮುಂದುವರೆಸಬೇಕು ಎಂದು ದೆಹಲಿ ವಿವಿ ಕೇಳಿದೆ.
ಇದೀಗ ಚೆಂಡು ಯುಜಿಸಿ ಅಂಗಳದಲ್ಲಿದ್ದು, ನಾಳೆ ಯುಜಿಸಿ ಕೈಗೊಳ್ಳುವ ನಿರ್ಧಾರದ ಮೇಲೆ ದೆಹಲಿ ವಿಶ್ವವಿದ್ಯಾಲಯದ ಬಿಕ್ಕಟ್ಟಿನ ಭವಿಷ್ಯ ನಿಂತಿದೆ. ಈ ನಡುವೆ ಪ್ರಕರಣ ಕುರಿತಂತೆ ಮಾತನಾಡಿರುವ ವಿವಿಯ ಮಾಧ್ಯಮ ಸಲಹೆಗಾರರು, ವಿವಿಯ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಯುಜಿಸಿಯಿಂದ ಉತ್ತರ ಬಂದ ಬಳಿಕ ನಾವು ಪ್ರವೇಶಾತಿ ಆರಂಭಿಸಬಹುದಾಗಿದೆ ಎಂದು ಹೇಳಿದ್ದಾರೆ.
ನಾಲ್ಕು ವರ್ಷಗಳ ಪದವಿ ಪೂರ್ವ ಕಾರ್ಯಕ್ರಮವನ್ನು ಹಿಂಪಡೆದು, ಹಿಂದಿನಂತೆ ಮೂರು ವರ್ಷಗಳ ಪದವಿ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಿಸುವಂತೆ ಯುಜಿಸಿ ದೆಹಲಿ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯಿಸುವಂತೆ ನಿನ್ನೆ 24 ಗಂಟೆಗಳ ಗಡುವು ಕೂಡ ನೀಡಿತ್ತು.
ದೆಹಲಿ ವಿವಿ ಮತ್ತು ಯುಜಿಸಿ ನಡುವಿನ ಬಿಕ್ಕಟ್ಟು ಇದೀಗ ಹೊಸ ಹಾದಿಯಲ್ಲಿ ಸಾಗಿದ್ದು, ನಾಳೆ ಯುಜಿಸಿ ಕೈಗೊಳ್ಳುವ ನಿರ್ಧಾರದ ಮೇಲೆಯೇ ವಿದ್ಯಾರ್ಥಿಗಳ ಭವಿಷ್ಯ ಅಡಗಿದೆ. ಆದರೆ ಶೈಕ್ಷಣಿಕ ತಜ್ಞರು ಅಭಿಪ್ರಾಯಪಡುವಂತೆ ಪ್ರಸ್ತುತ ದೆಹಲಿ ವಿವಿ ಮುಂದಿಟ್ಟುರುವ ಪ್ರಸ್ತಾಪಕ್ಕೆ ಯುಜಿಸಿ ಅನುಮೋದನೆ ನೀಡಿದರೆ ಮಾತ್ರವೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯ ಆರಂಭವಾಗಲಿದೆ. ಇಲ್ಲವಾದರೆ ಮತ್ತೆ ಬಿಕ್ಕಟ್ಟು ಮುಂದುವರೆಯಲಿದೆ.