ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲೂಯಿಸ್ ಸ್ವಾರೇಜ್‌ಗೆ ನಾಲ್ಕು ತಿಂಗಳ ನಿಷೇಧ

ಉರುಗ್ವೆ ತಂಡದ ಪ್ರಮುಖ ಆಟಗಾರ ಲೂಯಿಸ್ ಸ್ವಾರೇಜ್ ಅವರನ್ನು ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಫುಟಬಾಲ್ ಪಂದ್ಯಗಳಿಂದ ನಿಷೇಧಿಸಲಾಗಿದೆ.

Srinivasa Murthy VN
Updated On : 26 Jun 2014, 8:25 am

ರಿಯೋಡಿ ಜನೈರೋ: ಉರುಗ್ವೆ ತಂಡದ ಪ್ರಮುಖ ಆಟಗಾರ ಲೂಯಿಸ್ ಸ್ವಾರೇಜ್ ಅವರನ್ನು ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಫುಟಬಾಲ್ ಪಂದ್ಯಗಳಿಂದ ನಿಷೇಧಿಸಲಾಗಿದೆ.

ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿಯ ಇಟಲಿ ವಿರುದ್ಧದ ಪಂದ್ಯದಲ್ಲಿ ಉರುಗ್ವೆ ತಂಡದ ಆಟಗಾರ ಲೂಯಿಸ್ ಸ್ವಾರೇಜ್ ಅವರು ಎದುರಾಳಿ ಆಟಗಾರನನ್ನು ಕಚ್ಚಿಗಾಯಗೊಳಿಸಿದ ಕಾರಣ ಅವರನ್ನು ಮುಂದಿನ ನಾಲ್ಕು ತಿಂಗಳ ಕಾಲ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯದಿಂದ ಫೀಫಾ ನಿಷೇಧಿಸಿದೆ.

ಮಂಗಳವಾರ ನಡೆದ ಉರುಗ್ವೆ ಮತ್ತು ಇಟಲಿ ನಡುವಿನ ಪಂದ್ಯದ ವೇಳೆ ಲೂಯಿಸ್ ಸ್ವಾರೇಜ್ ಅವರು ಇಟಲಿ ಆಟಗಾರ ಜಿಯಾರ್ಜಿಯೋ ಚಿಲಿ ಅವರನ್ನು ಕಚ್ಚಿ ಗಾಯಗೊಳಿಸಿದ್ದರು. ಘಟನೆ ಕುರಿತಂತೆ ಚಿಲಿ ಅವರು ಫೀಪಾಗೆ ದೂರು ನೀಡಿದ್ದು, ಫೀಫಾ ಅಧ್ಯಕ್ಷ ಕ್ಲಾಡಿಯೋ ಸಲ್ಸರ್ ಅವರ ನೇತೃತ್ವದಲ್ಲಿ ಇಂದು ವಿಚಾರಣೆ ನಡೆಸಿದ ಅಧಿಕಾರಿಗಳು, ಸ್ವಾರೇಜ್ ಅವರಿಗೆ ನಾಲ್ಕು ತಿಂಗಳ ನಿಷೇಧ ಹೇರಿದ್ದಾರೆ. ಅಲ್ಲದೆ 1 ಲಕ್ಷ 12 ಸಾವಿರ ಡಾಲರ್ ಹಣವನ್ನು ದಂಡವಾಗಿ ಪಾವತಿಸುವಂತೆ ಸ್ವಾರೇಜ್‌ಗೆ ಸೂಚನೆ ನೀಡಿದ್ದಾರೆ. ಅಂತೆಯೇ ನಿಷೇಧವನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಫೀಫಾ ಆದೇಶ ಹೊರಡಿಸಿದೆ.

ಫೀಫಾ ನಿರ್ಧಾರದಿಂದಾಗಿ ಉರುಗ್ವೆ ತಂಡದ ಸ್ಟ್ರೈಕರ್ ಆಗಿರುವ ಸ್ವಾರೇಜ್ ಅವರು ವಿಶ್ವಕಪ್ ಪಂದ್ಯಾವಳಿಯಿಂದಲೇ ದೂರ ಉಳಿಯುವಂತಾಗಿದೆ. ಉರುಗ್ವೆ ತಂಡದ ಮುಂದಿನ 9 ಅಂತಾರಾಷ್ಟ್ರೀಯ ಪಂದ್ಯಗಳಿಗೂ ಸ್ವಾರೇಜ್ ಅಲಭ್ಯರಾಗಲಿದ್ದಾರೆ. ಇನ್ನು ನಾಲ್ಕು ತಿಂಗಳ ಕಾಲ ಸ್ವಾರೇಜ್ ಅವರು ಫುಟ್‌ಬಾಲ್‌ಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಫೀಫಾ ಎಚ್ಚರಿಕೆ ನೀಡಿದೆ. ಆ ಮೂಲಕ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಇಂತಹ ಕೃತ್ಯಗಳನ್ನು ಫೀಫಾ ಎಂದಿಗೂ ಸಿಹಿಸಿಕೊಳ್ಳುವುದಿಲ್ಲ ಎಂಬ ಎಚ್ಚರಿಕೆಯನ್ನು ರವಾನಿಸಿದೆ.

ಉರುಗ್ವೆ ತಂಡದ ಆಟಗಾರ ಲೂಯಿಸ್ ಸ್ವಾರೇಜ್ ಅವರು ಈ ಹಿಂದೆಯೂ ಕೂಡ ಹಲವು ಬಾರಿ ಇಂತಹುದೇ ಘಟನೆಗಳಿಂದ ನಿಷೇಧಕ್ಕೆ ಒಳಗಾಗಿದ್ದರು. ಲೂಯಿಸ್ ಸ್ವಾರೇಜ್ ಅವರು ಕಚ್ಚುವಿಕೆಯಿಂದಲೇ ಖ್ಯಾತಿ ಪಡೆದಿದ್ದು, ಎದುರಾಳಿ ಆಟಗಾರರನ್ನು ಕಚ್ಚುವ ಅವರ ಪ್ರಕ್ರಿಯೆ ಬೆಟ್ಟಿಂಗ್ ನಡೆಸುವಷ್ಟು ಕು'ಖ್ಯಾತಿ' ಪಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement