ಕಾಪ್ಟರ್ ಹಗರಣ: ಪ.ಬಂಗಾಳ ರಾಜ್ಯಪಾಲರ ವಿಚಾರಣೆ
ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಪ. ಬಂಗಾಳ ರಾಜ್ಯಪಾಲ ಎಂ.ಕೆ.ನಾರಾಯಣನ್..
ಕೋಲ್ಕತಾ: ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪಶ್ಚಿಮ ಬಂಗಾಳದ ರಾಜ್ಯಪಾಲ ಎಂ.ಕೆ.ನಾರಾಯಣನ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
201ರಲ್ಲಿ ನಡೆದಿದ್ದ ಬಹುಕೋಟಿ ವಿವಿಐಪಿ ಕಾಪ್ಟರ್ ಹಗರಣದಲ್ಲಿ ಎಂ.ಕೆ.ನಾರಾಯಣನ್ ಅವರನ್ನು ಸಾಕ್ಷಿಯಾಗಿ ಪರಿಗಣಿಸಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇಟಲಿ ಮೂಲದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ಅಗಸ್ಟಾ ವೆಸ್ಟ್ ಲ್ಯಾಂಡ್, ಅದರ ಸಹಾಯಕ ಸಂಸ್ಥೆ ಫಿನ್ ಮೆಕಾನಿಕಾ ಮತ್ತು ಭಾರತೀಯ ರಕ್ಷಣಾ ಇಲಾಖೆಯ ನಡುವೆ ನಡೆದಿದ್ದ ಸುಮಾರು 3600ಕೋಟಿ ಮೊತ್ತದ ಒಪ್ಪಂದ ಕುರಿತಂತೆ ಎಂ.ಕೆ.ನಾರಾಯಣನ್ ರನ್ನು ವಿಚಾರಣೆಗೊಳಪಡಿಸಲಾಗಿದೆ.
ವಿವಿಐಪಿಗಳ ಪ್ರಯಾಣಕ್ಕಾಗಿ ಅಂದು ಈ ಸಂಸ್ಥೆಗಳಿಂದ ಸುಮಾರು 12 ಅತ್ಯಾಧುನಿಕ ಹೆಲಿಕಾಪ್ಟರ್ಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ರಕ್ಷಣಾ ಇಲಾಖೆಯೊಂದಿಗಿನ ಈ ಒಪ್ಪಂದ ಕುದುರಿಸಲು ಅಂತಾರಾಷ್ಟ್ರೀಯ ಮಧ್ಯವರ್ತಿಗಳಿಂದ ಭಾರಿ ಪ್ರಮಾಣದ ಕಿಕ್ಬ್ಯಾಕ್ ಪಡೆದ ಆರೋಪವಿದ್ದು, ಹಗರಣ ಸಂಬಂಧ ಈಗಾಗಲೇ ನಿವೃತ್ತ ಸೇನಾ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರನ್ನು ಕೂಡ ವಿಚಾರಣೆಗೊಳಪಡಿಸಲಾಗಿತ್ತು.
ಪ್ರಸ್ತುತ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ನಾರಾಯಣನ್ ಅವರು, ಕಾಪ್ಟರ್ ಹಗರಣದ ವೇಳೆ ಅಂದರೆ 2010ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದ ಭದ್ರತಾ ಸಲಹೆಗಾರರಾಗಿದ್ದರು. ನಾರಾಯಣನ್ ಅವರು ಕಾಪ್ಟರ್ ಖರೀದಿ ಸಂಬಂಧ 2005ರಲ್ಲಿ ನಡೆದಿದ್ದ ತಾಂತ್ರಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾಪ್ಟರ್ ಹಗರಣ ಬೆಳಕಿಗೆ ಬಂದ ಬಳಿಕ ಒಪ್ಪಂದವನ್ನು ಕೇಂದ್ರ ಸರ್ಕಾರ ಅಮಾನತು ಮಾಡಿದ್ದು, ಈಗಾಗಲೇ ಈ ಸಂಬಂಧ ಇಟಲಿಯಲ್ಲಿ ಕೂಡ ಅಲ್ಲಿನ ಸರ್ಕಾರ ತನಿಖೆ ನಡೆಸುತ್ತಿದೆ.