ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನಿಷೇಧಿಸಿ: ಹರ್ಷವರ್ಧನ್
ಶಾಲೆಗಳಿಂದ ಲೈಂಗಿಕ ಶಿಕ್ಷಣವನ್ನು ನಿಷೇಧಿಸಬೇಕು ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್..
ನವದೆಹಲಿ: ಶಾಲೆಗಳಿಂದ ಲೈಂಗಿಕ ಶಿಕ್ಷಣವನ್ನು ನಿಷೇಧಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಶುಕ್ರವಾರ ಹೇಳಿದ್ದಾರೆ.
ಇತ್ತೀಚೆಗಷ್ಟೇ ಕಾಂಡೋಮ್ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಅಂತಹುದೇ ಮತ್ತೊಂದು ಹೇಳಿಕೆ ನೀಡಿದ್ದು, ಅವರು ಬಿಡುಗಡೆ ಮಾಡಿರುವ 'ದೆಹಲಿ ಶಾಲೆಗಳಿಗೆ ತಮ್ಮ ದೂರದರ್ಶಿತ್ವದ ದಾಖಲೆ'ಯಲ್ಲಿ, ಶಾಲೆಗಳಿಂದ ಲೈಂಗಿಕ ಶಿಕ್ಷಣವನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಯೋಗ ಶಿಕ್ಷಣವನ್ನು ಶಾಲಾ ಶಿಕ್ಷಣದಲ್ಲಿಯೇ ಕಡ್ಡಾಯಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ತಮ್ಮ ವೆಬ್ಸೈಟ್ನಲ್ಲಿ ಸ್ಪಷ್ಟನೆ ನೀಡಿರುವ ಹರ್ಷವರ್ಧನ್ ಅವರು, ವಿಷಯಾಧಾರಿತ ಪಠ್ಯಗಳ ಜೊತೆ ಜೊತೆಗೇ ಮೌಲ್ಯಾಧಾರಿತ ಶಿಕ್ಷಣವನ್ನು ಸಂಯೋಜಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಸಚಿವ ಡಾ.ಹರ್ಷವರ್ಧನ್ ಅವರು ಅಮೆರಿಕ ಪ್ರವಾಸದಲ್ಲಿದ್ದು, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಕಾಂಡೋಮ್ ಕುರಿತಂತೆ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಮಾಧ್ಯಮಗಳು ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದ ಡಾ.ಹರ್ಷವರ್ಧನ್ ಅವರು, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ. ನಾನು ಹೆಚ್ಐವಿ ತಡೆಗಾಗಿ ಕಾಂಡೋಮ್ ಅವಶ್ಯಕವಾಗಿದೆ. ಆದರ ಅದಕ್ಕಿಂತಲೂ ಮಿಗಿಲಾಗಿ ಪ್ರಮಾಣಿಕರಾಗಿರುವುದು ಅದಕ್ಕಿಂತಲೂ ದೊಡ್ಡ ಸುರಕ್ಷತಾ ಮಾರ್ಗವಾಗಿದೆ ಎಂದು ಹೇಳಿದ್ದೇ ಅಷ್ಟೇ ಎಂದಿದ್ದರು.
ಇದಕ್ಕೂ ಮೊದಲು ಅಂದರೆ ಸಂದರ್ಶನದಲ್ಲಿ ನೀಡಿದ್ದ ಹೇಳಿಕೆಯಂತೆ ಡಾ.ಹರ್ಷವರ್ಧನ್ ಅವರು, ಏಡ್ಸ್/ಹೆಚ್ಐವಿ ಅಭಿಯಾನಗಳಲ್ಲಿ ಕಾಂಡೋಮ್ ಬಳಸುವಂತೆ ಉತ್ತೇಜನ ನೀಡುವುದು ಅಕ್ರಮ ಲೈಂಗಿಕ ಸಂಬಂಧಕ್ಕೆ ಪರೋಕ್ಷ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದ್ದರು. ಇದು ಮಾಧ್ಯಮಗಳಲ್ಲಿ ವಿವಾದಕ್ಕೆ ಕಾರಣವಾಗಿತ್ತು.