ಇರಾಕ್ ಬಿಕ್ಕಟ್ಟು: ವಾಯುದಾಳಿಗೆ ಅಮೆರಿಕ ಚಾಲನೆ..?
ಇರಾಕ್ ಬಿಕ್ಕಟ್ಟು ಮುಂದುವರೆದಿರುವಂತೆಯೇ..
ಬಾಗ್ದಾದ್: ಇರಾಕ್ ಬಿಕ್ಕಟ್ಟು ಮುಂದುವರೆದಿರುವಂತೆಯೇ ಪ್ರಮುಖ ಬೆಳವಣಿಗೆಯೊಂದರಲ್ಲಿ ಅಮೆರಿಕದ ಚಾಲಕ ರಹಿತ ಯುದ್ಧ ವಿಮಾನ(ಡ್ರೋನ್)ಗಳು ರಾಜಧಾನಿ ಬಾಗ್ದಾದ್‌ನತ್ತ ಹಾರಿವೆ.
ದಿನಕಳೆದಂತೆ ಇರಾಕ್ ಸಂಘರ್ಷ ತಾರಕ್ಕೇರುತ್ತಿದ್ದು, ಸುನ್ನಿ ಬಂಡುಕೋರರ ಹಾವಳಿ ಮಿತಿ ಮೀರಿದೆ. ಆದರೆ ಇಷ್ಟು ದಿನ ಉಗ್ರರ ವಿರುದ್ಧದ ವಾಯುದಾಳಿಗೆ ಹಿಂದೇಟು ಹಾಕುತ್ತಿದ್ದ 'ದೊಡ್ಡಣ್ಣ' ಅಮೆರಿಕ ತನ್ನ ಚಾಲಕ ರಹಿತ ಲಘು ಯುದ್ಧ ವಿಮಾನಗಳನ್ನು (ಡ್ರೋನ್) ಇರಾಕ್‌ಗೆ ರವಾನಿಸಿದೆ ಎಂದು ಹೇಳಲಾಗುತ್ತಿದೆ. ಸುನ್ನಿ ಬಂಡುಕೋರರ ವಶದಲ್ಲಿರುವ ಟಿಕ್ರಿತ್ ನಗರದಲ್ಲಿ ಸಾವಿರಾರು ಇರಾಕ್ ಸೈನಿಕರು ಉಗ್ರರ ವಿರುದ್ಧ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಉಗ್ರರ ವಿರುದ್ಧ ಇರಾಕ್‌ನಲ್ಲಿ ವಾಯುದಾಳಿ ಸಾಧ್ಯತೆಯನ್ನು ಅಮೆರಿಕ ಹಿಂದಿನಿಂದಲೂ ಅಲ್ಲಗಳೆಯುತ್ತಾ ಬಂದಿದೆ. ಆದರೆ ಪ್ರಸಕ್ತ ವಿದ್ಯಮಾನಗಳು ಮತ್ತು ಮಿತಿ ಮೀರಿ ವರ್ತಿಸುತ್ತಿರುವ ಉಗ್ರರರನ್ನು ಮಟ್ಟಹಾಕಲು ವಾಯುದಾಳಿ ನಡಸಲೇಬೇಕಾದ ಅನಿವಾರ್ಯತೆಯಲ್ಲಿ ಅಮೆರಿಕ ಸಿಲುಕಿದೆ. ಹೀಗಾಗಿ ಅಮೆರಿಕ ತನ್ನ ಕೆಲ ಭದ್ರತಾ ಪಡೆಗಳನ್ನು ಇರಾಕ್‌ಗೆ ರವಾನಿಸಿದ್ದು, ಅವರೊಂದಿಗೆ ಕೆಲ ಚಾಲಕ ರಹಿತ ಲಘು ಯುದ್ಧವಿಮಾನ (ಡ್ರೋನ್)ಗಳನ್ನು ರವಾನಿಸಿದೆ ಎನ್ನಲಾಗುತ್ತಿದೆ.
ಆದರೆ ವಾಯುದಾಳಿಗೆ ಅಮೆರಿಕ ಈ ಹಿಂದಿನಿಂದಲೇ ಉಪಾಯ ಮಾಡಿತ್ತೇ ಎಂಬ ಪ್ರಶ್ನೆ ಮೂಡುತ್ತಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರ ಈ ಹಿಂದಿನ ಇರಾಕ್ ಭೇಟಿ ಈ ಪ್ರಶ್ನೆಗೆ ಮತ್ತಷ್ಚು ಬಲತುಂಬುತ್ತದೆ. ಇವಿಷ್ಟೇ ಅಲ್ಲದೆ ಇರಾಕ್ ಸಂಘರ್ಷದ ಕುರಿತು ಅಂತಾರಾಷ್ಟ್ರೀಯ ಸೇನಾಪಡೆ 'ನ್ಯಾಟೋ' ತೋರುತ್ತಿರುವ ಕಾಳಜಿ ಕೂಡ ವಾಯುದಾಳಿಯನ್ನು ಪುಷ್ಟೀಕರಿಸುತ್ತಿವೆ.
ಇನ್ನು ಈ ಹಿಂದೆ ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಹೆಸರನ್ನು ಹೇಳಲಿಚ್ಛಿಸದ ಅಮೆರಿಕದ ಭದ್ರತಾ ಅಧಿಕಾರಿಯೊಬ್ಬರು, 'ಇರಾಕ್‌ನಲ್ಲಿರುವ ಅಮೆರಿಕನ್ನರ ರಕ್ಷಣೆಗಾಗಿ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಬಾಗ್ದಾದ್‌ಗೆ ರವಾನಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು. ಈ ಎಲ್ಲ ಅಂಶಗಳು ಇರಾಕ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕ ವಾಯುದಾಳಿ ನಡೆಸಲಿದೆ ಎಂಬ ಅಂಶವನ್ನು ಪುಷ್ಟೀಕರಿಸುತ್ತದೆ.
ಒಟ್ಟಾರೆ ಇರಾಕ್ ಸಂಘರ್ಷ ಇದೀಗ ನಿರ್ಣಾಯಕ ಹಂತವನ್ನು ತಲುಪಿದ್ದು, ಅಮೆರಿಕ ನಿರ್ಧಾರ ಪ್ರಧಾನಿ ನೂರಿ ಅಲಿ ಮಲಿಕಿ ಅವರಿಗೆ ಕೊಂಚ ಸಮಾಧಾನವನ್ನು ಉಂಟುಮಾಡಿರಬಹುದು.