ಕಾಂಗ್ರೆಸ್ ಸಭೆಗೆ ಶಾಸಕ, ಸಚಿವರ ಗೈರು: ದಿಗ್ವಿಜಯ್ ಅಸಮಾಧಾನ
ಕಾಂಗ್ರೆಸ್ ಸರ್ವ ಪದಾಧಿಕಾರಿಗಳ ಸಭೆಗೆ ಗೈರಾದ ಶಾಸಕ, ಸಚಿವರ ವಿರುದ್ಧ ರಾಜ್ಯ ಉಸ್ತುವಾರಿ ಮುಖಂಡ ದಿಗ್ವಿಜಯ್ ಸಿಂಗ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಸರ್ವ ಪದಾಧಿಕಾರಿಗಳ ಸಭೆ ನಡೆಯುತ್ತಿದ್ದು, ಸಭೆಗೆ ಗೈರಾದ ಶಾಸಕ, ಸಚಿವರ ವಿರುದ್ಧ ರಾಜ್ಯ ಉಸ್ತುವಾರಿ ಮುಖಂಡ ದಿಗ್ವಿಜಯ್ ಸಿಂಗ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2 ದಿನಗಳ ಕಾಲ ನಡೆಯಲಿರುವ ಕಾಂಗ್ರೆಸ್ ಸರ್ವ ಪದಾಧಿಕಾರಿಗಳ ಸಭೆಗೆ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಇಂದು ಚಾಲನೆ ನೀಡಿದರು. ಸಭೆ ಆರಂಭವಾಗುತ್ತಿದ್ದಂತೆಯೇ ಸಭೆಗೆ ಗೈರಾದ ಶಾಸಕ ಮತ್ತು ಸಚಿವರ ವಿರುದ್ಧ ದಿಗ್ವಿಜಯ್ ಸಿಂಗ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗೈರಾದ ಮುಖಂಡರಿಗೆ ನೋಟಿಸ್ ನೀಡುವಂತೆ ಕೆಪಿಸಿಸಿಗೆ ಸೂಚನೆ ನೀಡಿದ್ದಾರೆ. ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಸ್ತುತ ಸಭೆಗೆ ಗೈರಾಗಿದ್ದು, ದಿಗ್ವಿಜಯ್ ಸಿಂಗ್ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.
ಸಿದ್ದರಾಮಯ್ಯ ಅವರ ಇಂದಿನ ಕಾರ್ಯಕ್ರಮ ಪೂರ್ವ ನಿಯೋಜಿತವಾಗಿದ್ದು, ದಿಗ್ವಿಜಯ್ ಸಿಂಗ್ ಅವರ ಅಸಮಾಧಾನದ ವಿಚಾರ ತಿಳಿಯುತ್ತಿದ್ದಂತೆಯೇ ಅವರು ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಭೆಗೆ ದೌಡಾಯಿಸಿದ್ದಾರೆ.
ತ್ರಿಮೂರ್ತಿಗಳಿಗೆ ಹೋಲಿಸಿದ ಖರ್ಗೆ
ಇದೇ ವೇಳೆ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವಿಪಕ್ಷ ಮುಖಂಡ ಸ್ಥಾನಕ್ಕೆ ಆಯ್ಕೆಯಾದ ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೇ ಕಾರ್ಯಕ್ರಮದಲ್ಲಿ ಸನ್ಮಾನ ಏರ್ಪಡಿಸಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ರಾಜ್ಯ ಉಸ್ತುವಾರಿವಹಿಸಿಕೊಂಡಿರುವ ಮುಖಂಡರನ್ನು ತ್ರಿಮೂರ್ತಿಗಳಿಗೆ ಹೊಲಿಸಿದರು.
ರಾಜ್ಯ ಉಸ್ತುವಾರಿ ಮುಖಂಡ ದಿಗ್ವಿಜಯ್ ಸಿಂಗ್, ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರು ಬ್ರಹ್ಮ ವಿಷ್ಟು ಮಹೇಶ್ವರ ಅವರಿಗೆ ಹೋಲಿಸಿದರು. 'ಬ್ರಹ್ಮ ವಿಷ್ಟು ಮಹೇಶ್ವರರು ಹೇಗೆ ಜನರ ಹಣೆ ಬರಹ ಬರೆಯುತ್ತಾರೆಯೋ ಹಾಗೆಯೇ ಈ ನಮ್ಮ ಪಕ್ಷದ ತ್ರಿಮೂರ್ತಿಗಳು ಕಾರ್ಯಕರ್ತರ ಹಣೆಬರಹ ಬರೆಯುತ್ತಾರೆ. ಸ್ವಾರ್ಥವನ್ನು ಬದಿಗೊತ್ತಿ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಜವಾಬ್ದಾರಿ ಇವರ ಮೇಲಿದೆ. ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷವನ್ನು ಯಶಸ್ಸಿನತ್ತ ಮುನ್ನಡೆಸಬೇಕು' ಎಂದು ಅವರ ಕರೆ ನೀಡಿದರು.
ಕರಪತ್ರ ಹಂಚಿದ ಪರಮೇಶ್ವರ್ ಬೆಂಬಲಿಗರು..?
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಇದದ್ದೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ಎಂದು ಹೇಳುವ ಕರಪತ್ರಗಳನ್ನು ಕೆಲ ಕಾರ್ಯಕರ್ತರು ಸಭೆಯಲ್ಲಿ ಹಂಚಿದ್ದಾರೆ. ದಲಿತ ವರ್ಗದ ಪ್ರಭಾವಿ ಮುಖಂಡರಾದ ಡಾ.ಜಿ.ಪರಮೇಶ್ವರ ಅವರಿಗೆ ಡಿಸಿಎಂ ಹುದ್ದೆ ನೀಡದೇ ಇರುವುದರಿಂದ ದಲಿತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬೀಳಲಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲುವಂತಾಯಿತು ಎಂದು ಕರಪತ್ರದಲ್ಲಿ ಆರೋಪಿಸಲಾಗಿದೆ.
ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ
ಅತ್ತ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಯುತ್ತಿದ್ದರೆ ಇತ್ತ ಡಾ.ಪರಮೇಶ್ವರ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಆಗ್ರಹಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಕೆಲ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಪಕ್ಷದ ಬ್ಲಾಕ್ ಅಧ್ಯಕ್ಷ ನಯಾಜ್ ಅಹಮದ್ ಅವರ ನೇತೃತ್ವದಲ್ಲಿ ಪರಮೇಶ್ವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ಕೂಡಲೇ ರಾಜ್ಯ ಉಸ್ತುವಾರಿ ನಾಯಕ ದಿಗ್ವಿಜಯ್ ಸಿಂಗ್ ಅವರು ಸ್ಥಳಕ್ಕಾಗಮಿಸಬೇಕು ಎಂದು ಬೆಂಬಲಿಗರು ಆಗ್ರಹಿಸಿದ್ದಾರೆ.
ಒಟ್ಟಾರೆ ಅರಮನೆ ಮೈದಾನದಲ್ಲಿ ಇಂದು ಆರಂಭಗೊಂಡ 2ದಿನಗಳ ಕಾಂಗ್ರೆಸ್ ಸರ್ವ ಪದಾಧಿಕಾರಿಗಳ ಸಭೆ ಹಲವು ವಿಚಾರಗಳಿಂದಾಗಿ ಸುದ್ದಿಯಾಗಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದ ನಿಮಿತ್ತ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಕುರಿತ ಆತ್ಮಾವಲೋಕನಕ್ಕಾಗಿ ಈ ಸಭೆ ಕರೆಯಲಾಗಿದೆ. ಅಲ್ಲದೆ ಕಳೆದ ಒಂದು ವರ್ಷದಿಂದ ಸರ್ಕಾರ ನಡೆದು ಬಂದ ಹಾದಿ, ಮುಂದಿರುವ ಸಾವಲುಗಳ ಕುರಿತಾಗಿ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.