ಚೆನ್ನೈ ಕಟ್ಟಡ ಕುಸಿತ ಪ್ರಕರಣ: ಮೃತರ ಸಂಖ್ಯೆ 11ಕ್ಕೆ ಏರಿಕೆ
ಶನಿವಾರ ಸಂಭವಿಸಿದ್ದ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭಾನುವಾರವೂ ಮುಂದುವರೆದಿದೆ.
ಚೆನ್ನೈ: ಚೆನ್ನೈ ಹೊರವಲಯದ ಮೌಲಿವಾಕ್ಕಂನಲ್ಲಿ ಶನಿವಾರ ಸಂಭವಿಸಿದ್ದ 12 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭಾನುವಾರವೂ ಮುಂದುವರೆದಿದೆ.
ಕಟ್ಟದಲ್ಲಿ ಇನ್ನೂ 25ರಿಂದ 50 ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಇಲ್ಲಿಯವರೆವಿಗೂ 26 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಅವಶೇಷಗಳಡಿಯಲ್ಲಿ ಮತ್ತಷ್ಟು ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು, ಕಾರ್ಯಾಚರಣೆ ಮುಂದುವರೆದಿದೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಸಿಬ್ಬಂದಿಗಳು ಪ್ರಸ್ತುತ ಕಟ್ಟಡದ 9ನೇ ಮಹಡಿಯವರೆವಿಗೂ ಶೋಧಕಾರ್ಯ ನಡೆಸಿದ್ದು, ಇನ್ನುಳಿದ ಕೊನೆಯ 3 ಮಹಡಿಗಳಲ್ಲಿ ಶೋಧ ಕಾರ್ಯ ಪ್ರಗತಿಯಲ್ಲಿದೆ. ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಕಟ್ಟಡ ದುರಂತದಲ್ಲಿ ಮೃತಪಟ್ಟವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ. ಬಾಕಿ 9 ದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಕಟ್ಟಡದ ಮಾಲೀಕ ಮನೋಹರ್ ಮತ್ತು ಆತನ ಪುತ್ರ ಮುತ್ತು ಸೇರಿದಂತೆ ಒಟ್ಟು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಕಿ ಇಬ್ಬರು ಕಟ್ಟಡ ಕಾಮಗಾರಿ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ ಇಂಜಿನಿಯರ್‌ಗಳು ಎಂದು ತಿಳಿದುಬಂದಿದೆ. ಬಂಧಿತರ ವಿರುದ್ದ ಐಪಿಸಿ ಸೆಕ್ಷನ್ 304 (ಹತ್ಯಾ ಪ್ರಯತ್ನ)ರ ಅಡಿಯಲ್ಲಿ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ರಕ್ಷಣೆಗಾಗಿ ಧಾವಿಸಿದ ಶ್ವಾನದಳ
ಮೂಲಗಳ ಪ್ರಕಾರ ಶೋಧಕಾರ್ಯ ಪೂರ್ಣಗೊಳ್ಳಲು ಇನ್ನೂ 2 ದಿನಗಳು ಬೇಕಿದ್ದು, ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಗುರುತಿಸಲು ಮತ್ತು ಮೃತ ದೇಹಗಳ ಪತ್ತೆಗಾಗಿ ಶ್ವಾನದಳವನ್ನು ಬಳಸಿಕೊಳ್ಳಲಾಗುತ್ತಿದೆ. ಸಂಪೂರ್ಣ ಕಟ್ಟಡದ ಭಾರ ಕೆಳ ಅಂತಸ್ತಿನ ಮೇಲೆ ಬಿದ್ದಿದ್ದು, ರಕ್ಷಣಾ ಸಿಬ್ಬಂದಿ ಅಲ್ಲಿಗೆ ತೆರಳಲು ಅಸಾಧ್ಯವಾಗಿದೆ. ಹೀಗಾಗಿ ಅಲ್ಲಿ ಅಪಾಯದಲ್ಲಿ ಸಿಲುಕಿರುವವ ರಕ್ಷಣಾ ಕಾರ್ಯದಲ್ಲಿ ಶ್ವಾನದಳ ಪ್ರಮುಖ ಪಾತ್ರವಹಿಸಲಿವೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಉಪ ಆಯುಕ್ತ ಆರ್.ಎಸ್ ಸುಧಾಕರ್ ಅವರು, 'ಕಟ್ಟಡದ ಕೆಳಅಂತಸ್ತನ್ನು ತಲುಪಿದಾಗ ಮಾತ್ರ ಅವಶೇಷಗಳಡಿಯಲ್ಲಿ ಎಷ್ಟು ಜನ ಸಿಲುಕಿದ್ದಾರೆ ಎಂಬುದು ತಿಳಿಯಲಿದೆ' ಎಂದು ಹೇಳಿದ್ದಾರೆ.
ತಲಾ 10 ಲಕ್ಷ ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಜಯಲಲಿತಾ
ಇನ್ನು ಕಟ್ಟಡ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಿರುವ ಮುಖ್ಯಮಂತ್ರಿ ಜಯಲಲಿತಾ ಅವರು, ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಜಯಲಲಿತಾ ಅವರು ಘೋಷಿಸಿದ್ದಾರೆ.