ಬಿ.ಟೆಕ್, ಬಿಎಂಎಸ್ ಸ್ಥಗಿತ: ಡಿಯು ವಿರುದ್ಧ ಪ್ರತಿಭಟನೆ
ಬಿ.ಟೆಕ್ ಮತ್ತು ಬಿಎಂಎಸ್ ವಿಷಯಗಳನ್ನು ಸ್ಥಗಿತಗೊಳಿಸುವ ದೆಹಲಿ ವಿಶ್ವವಿದ್ಯಾಲಯ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು..
ನವದೆಹಲಿ: ಬಿ.ಟೆಕ್ ಮತ್ತು ಬಿಎಂಎಸ್ ವಿಷಯಗಳನ್ನು ಸ್ಥಗಿತಗೊಳಿಸುವ ದೆಹಲಿ ವಿಶ್ವವಿದ್ಯಾಲಯ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಭಾನುವಾರ ದೆಹಲಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ದೆಹಲಿ ವಿವಿಯ ನಾಲ್ಕು ವರ್ಷಗಳ ಪದವಿ ಪೂರ್ವ ಕಾರ್ಯಕ್ರಮಕ್ಕೆ ಯುಜಿಸಿ ಸೇರಿದಂತೆ ವಿದ್ಯಾರ್ಥಿಗಳಿಂದಲೂ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ಹಿಂದಿನಂತೆ ಮೂರು ವರ್ಷಗಳ ಪದವಿ ಕೋರ್ಸ್ಗಳನ್ನು ಮುಂದುವರೆಸಲು ವಿವಿ ನಿರ್ಧರಿಸಿತ್ತಾದರೂ, ಪ್ರಸಕ್ತ ವರ್ಷದಿಂದ ಬಿ.ಟೆಕ್ ಮತ್ತು ಬಿಎಂಎಸ್ ಕೋರ್ಸ್ಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತ್ತು. ಅಲ್ಲದೆ ಈ ಕುರಿತು ತನ್ನ ಸಿಬ್ಬಂದಿ ವರ್ಗಕ್ಕೆ ಸೂಚನೆ ನೀಡಿದ್ದ ವಿವಿ, ಪ್ರಸಕ್ತ ಸಾಲಿನಿಂದ ಬಿ.ಟೆಕ್ ಮತ್ತು ಬಿಎಂಎಸ್ ಕೋರ್ಸ್ಗಳಿಗೆ ಪ್ರವೇಶ ಪಡೆಯದಂತೆ ಸೂಚನೆ ನೀಡಿತ್ತು.
ದೆಹಲಿ ವಿವಿಯ ಈ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಬಿ.ಟೆಕ್ ಮತ್ತು ಬಿಎಂಎಸ್ ಕೋರ್ಸ್ಗಳನ್ನು ಸ್ಥಗಿತಗೊಳಿಸದಂತೆ ವಿದ್ಯಾರ್ಥಿಗಳು ಆಗ್ರಹಿಸುತ್ತಿದ್ದಾರೆ. ಈ ಕುರಿತಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ದೆಹಲಿ ನಿವಾಸದ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಅಲ್ಲದೆ ದೆಹಲಿ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ದೆಹವಿ ವಿವಿಯ ಈ ವಿವಾದಿತ ನಿರ್ಧಾರದ ಕುರಿತು ಯುಜಿಸಿ ಹಾಗೂ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ ತನ್ನ ನಿರ್ಧಾರಗಳಿಂದಾಗಿಯೇ ದೆಹಲಿ ವಿಶ್ವವಿದ್ಯಾಲಯ ಸದಾ ವಿವಾದಕ್ಕೆ ಗುರಿಯಾಗುತ್ತಿದೆ.