ಟಿಎಂಸಿ ಸಂಸದನ 'ಅತ್ಯಾಚಾರ' ಹೇಳಿಕೆಗೆ ಪತ್ನಿ ಕ್ಷಮೆ
ತಪಸ್ ಪಾಲ್ "ಅತ್ಯಾಚಾರ' ಹೇಳಿಕೆ ಕುರಿತಂತೆ ದೇಶಾದ್ಯಂತ ವ್ಯಾಪಕ..
ಕೊಲ್ಕತಾ: ತೃಣಮೂಲ ಕಾಂಗ್ರೆಸ್ ಮುಖಂಡ ತಪಸ್ ಪಾಲ್ ಅವರ ಅತ್ಯಾಚಾರ ಹೇಳಿಕೆ ಕುರಿತಂತೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಪಾಲ್ ಪರವಾಗಿ ಪತ್ನಿ ನಂದಿನಿ ಪಾಲ್ ಅವರು ಸಾರ್ವಜನಿಕ ಕ್ಷಮೆ ಯಾಚಿಸಿದ್ದಾರೆ.
ಈ ಹಿಂದೆ ಕಳೆದ ಜೂನ್ 14ರಂದು ತಮ್ಮ ಸ್ವಕ್ಷೇತ್ರ ಕೃಷ್ಣಾನಗರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಟಿಎಂಸಿ ಸಂಸದ ತಪಸ್ ಪಾಲ್ ಅವರು, ಸಿಪಿಎಂ ಕಾರ್ಯಕರ್ತರ ವಿರುದ್ಧ ತೀವ್ರ ಕಿಡಿಕಾರಿದ್ದರು. 'ಸಿಪಿಎಂ ನಿಂದ ನಮ್ಮ ಮಹಿಳಾ ಕಾರ್ಯಕರ್ತರಿಗೆ ಅಥವಾ ಅವರ ಪೋಷಕ, ಮಕ್ಕಳಿಗೆ ತೊಂದರೆಯಾದರೆ ಅವರನ್ನು ಖಂಡಿತವಾಗಿಯೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಪಿಸ್ತೂಲ್‌ಗಳಿಗೆ ಕೆಲಸ ನೀಡಿ, ಅವರ ಇಡೀ ಕುಟುಂಬವನ್ನು ನಾಶ ಮಾಡುತ್ತೇವೆ. ನಮ್ಮ ಕಾರ್ಯಕರ್ತರನ್ನು ಕಳುಹಿಸಿ ಅವರ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿಸುತ್ತೇವೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದರು.
ಇದೀಗ ಅವರ ಹೇಳಿಕೆ ಕುರಿತ ವಿಡಿಯೋಗಳು ಮಾಧ್ಯಮಗಳಿಗೆ ದೊರೆತಿದ್ದು, ತಪಸ್ ಪಾಲ್ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಪಾಲ್‌ಗೆ ಗಡುವು, ನಾಳೆ ಟಿಎಂಸಿ ಸಭೆ
ಸಾಮಾಜಿಕ ಜವಾಬ್ದಾರಿ ಹೊಂದಿರುವ ಸಚಿವನೇ ಈ ರೀತಿಯ ಲಜ್ಜೆಗೆಟ್ಟ ಹೇಳಿಕೆ ನೀಡಿರುವುದನ್ನು ವಿರೋಧಿಸಿ ವಿರೋಧ ಪಕ್ಷ, ಸಾಮಾಜಿಕ ಜಾಲತಾಣಗಳು ಮತ್ತು ಸಾಮಾಜಿಕ ಸಂಸ್ಥೆಗಳು ಸೇರಿದಂತೆ ಮಹಿಳಾ ಸಮಾಜಗಳಿಂದ ಬಾರಿ ವಿರೋಧ ವ್ಯಕ್ತವಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ತೃಣಮೂಲ ಕಾಂಗ್ರೆಸ್ ಪಕ್ಷ, ತಪಸ್ ಪಾಲ್ ಅವರಿಗೆ 48 ಗಂಟೆಗಳ ಗಡುವು ನೀಡಿದ್ದು, ಅಷ್ಟರೊಳಗೆ ವಿವರಣೆ ನೀಡುವಂತೆ ಆದೇಶಿಸಿದೆ. ಅಲ್ಲದೆ ಅತ್ಯಾಚಾರ ಹೇಳಿಕೆ ವಿವಾದ ಕುರಿತಂತೆ ಪ್ರತಿಪಕ್ಷಗಳಿಂದ ಎದುರಿಸಬಹುದಾದ ವ್ಯಾಪಕ ಟೀಕೆಗಳನ್ನು ಎದುರಿಸಲು ಮತ್ತು ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ತೀರ್ಮಾನ ಕೈಗೊಳ್ಳಲು ನಾಳೆ ಸಂಸದರ ಸಭೆಯನ್ನು ಕರೆದಿದೆ.
ಈ ಬಗ್ಗೆ ಮಾತನಾಡಿರುವ ಪ.ಬಂಗಳಾದ ಸಚಿವ ಪಾರ್ಥ ಚಟರ್ಜಿ, ಪಾಲ್ ಅವರು ಈ ಹೇಳಿಕೆಯನ್ನು ಎಲ್ಲ ಮತ್ತು ಯಾವಾಗ ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಪ್ರಕರಣವನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ. ಅವರು ಹೇಳಿಕೆ ನೀಡಿರುವುದು ಸತ್ಯವೇ ಆಗಿದ್ದರೆ ಅವರ ವಿರುದ್ಧ ಪಕ್ಷ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ತಪಸ್ ಪತ್ನಿ ನಂದಿನಿ ಸಾರ್ವಜನಿಕ ಕ್ಷಮೆ ಯಾಚನೆ
ಇನ್ನು ತಪಸ್ ಪಾಲ್ ಅವರ ಹೇಳಿಕೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಅವರ ಪತ್ನಿ ನಂದಿನಿ ಪಾಲ್ ಅವರು ಮಾಧ್ಯಮಗಳ ಮೂಲಕವಾಗಿ ಸಾರ್ವಜನಿಕ ಕ್ಷಮೆ ಯಾಚಿಸಿದ್ದಾರೆ. 'ನನ್ನ ಪತಿ ತಪಸ್ ಪಾಲ್ ಅವರು ಉದ್ದೇಶಪೂರ್ವಕವಾಗಿ ಇಂತಹ ಮಾತುಗಳನ್ನು ಆಡಿಲ್ಲ. ಆದರೂ ಅವರು ಅತ್ಯಾಚಾರದಂತಹ ಪದಬಳಕೆ ಮಾಡಿರುವುದು ತಪ್ಪು. ಅವರ ಪರವಾಗಿ ದೇಶದ ಜನತೆಯಲ್ಲಿ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ: ತಪಸ್ ಪಾಲ್
ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ್ಯ ವ್ಯಕ್ತವಾದ ಹಿನ್ನಲೆಯಲ್ಲೇ ಸ್ಪಷ್ಟನೆ ನೀಡಿರುವ ಸಂಸದ ತಪಸ್ ಪಾಲ್ ಅವರು, ತಮ್ಮ ಪಕ್ಷದ ವಿರುದ್ಧ ಪಿತೂರಿ ನಡೆಸುವವರ ವಿರುದ್ಧ ದಾಳಿ ನಡೆಸಿ ಎಂದು ಹೇಳಿದ್ದೇ ವಿನಃ ಅತ್ಯಾಚಾರ ನಡೆಸಿ ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದು ಹೇಳುವ ಮೂಲಕ ಪಾಲ್ ತಮ್ಮ ಹೇಳಿಕೆಯನ್ನು ತಿರುಚುವ ಯತ್ನ ಮಾಡಿದ್ದಾರೆ.
ಬಂಧನಕ್ಕೆ ಮಹಿಳಾ ಸಂಘಟನೆಗಳ ಆಗ್ರಹ
ತಪಸ್ ಪಾಲ್ ಅವರ ಸಂಸ್ಕಾರ ರಹಿತ ಹೇಳಿಕೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಹಿಳೆಯರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ತಪಸ್ ಪಾಲ್ ಅವರನ್ನು ಕೂಡಲೇ ಬಂಧಿಸಿ ಜೈಲಿಗಟ್ಟಬೇಕು ಎಂದು ಕೊಲ್ಕತಾ ಮೂಲದ ಮಹಿಳಾ ಸಂಘಟನೆಯ ಕಾರ್ಯಕರ್ತರು ಆಗ್ರಹಿಸಿದ್ದಾರೆ.