ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿ ವಿರುದ್ಧ ಅಮೆರಿಕ ಗೂಢಚಾರಿಕೆ..?

ಬಿಜೆಪಿ ಸೇರಿದಂತೆ ವಿಶ್ವದ 5 ಪ್ರಮುಖ ರಾಜಕೀಯ ಪಕ್ಷಗಳ ವಿರುದ್ಧ ಗೂಢಚಾರಿಕೆ ನಡೆಸಲು ಅಮೆರಿಕದ ಅನುಮತಿ ನೀಡಿತ್ತು ಎಂಬ ಆಘಾತಕಾರಿ ಅಂಶ ಈಗ ಬೆಳಕಿಗೆ ಬಂದಿದೆ.

Srinivasa Murthy VN
Updated On : 1 Jul 2014, 4:22 am

ವಾಷಿಂಗ್‌ಟನ್: ಭಾರತೀಯ ಜನತಾ ಪಾರ್ಟಿ ಸೇರಿದಂತೆ ವಿಶ್ವದ ಐದು ಪ್ರಮುಖ ರಾಜಕೀಯ ಪಕ್ಷಗಳ ವಿರುದ್ಧ ಗೂಢಚಾರಿಕೆ ನಡೆಸಲು ಅಮೆರಿಕದ ನ್ಯಾಯಾಲಯ ಅನುಮತಿ ನೀಡಿತ್ತು ಎಂಬ ಆಘಾತಕಾರಿ ಅಂಶ ಈಗ ಬೆಳಕಿಗೆ ಬಂದಿದೆ.

ಅಮೆರಿಕದ ವಾಷಿಂಗ್‌ಟನ್ ಪೋಸ್ಟ್ ವರದಿ ಮಾಡಿರುವಂತೆ, 2010ರಲ್ಲೇ 'ವಿದೇಶಿ ಗೂಢಚಾರ ನ್ಯಾಯಾಲಯ' ಪಾಕಿಸ್ತಾನದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ), ಈಜಿಪ್ಟ್‌ನ ಮುಸ್ಲಿಂ ಬ್ರದರ್‌ಹುಡ್, Egyptian National Salvation Front (ಇಎನ್‌ಎಸ್‌ಎಫ್), ಲೆಬೆನಾನ್ ದೇಶದ ಅಮಲ್, ವೆನುಜುವೆಲಾದ ಬೊಲಿವರಿಯನ್ ಕಾಂಟಿನೆಂಟಲ್ ಮತ್ತು ಭಾರತದ ಬಿಜೆಪಿ ವಿರುದ್ಧ ಗೂಢಚಾರಿಕೆ ನಡೆಸಲು ಅಮೆರಿಕ ನ್ಯಾಯಾಲಯ ಅನುಮತಿ ನೀಡಿದ್ದ ಅಂಶ ತಡವಾಗಿ ಬೆಳಕಿಗೆ ಬಂದಿದೆ.

ಇಡೀ ಅಮೆರಿಕ ಸರ್ಕಾರವನ್ನೇ ನಡುಗಿಸಿದ್ದ ಸ್ನೋಡೆನ್ ಪ್ರಕರಣದ ದಾಖಲೆಗಳಲ್ಲಿ ಇಂತಹ ಆಘಾತಕಾರಿ ಅಂಶಗಳು ಪತ್ತೆಯಾಗಿದ್ದು, ಅಮೆರಿಕದ ಪ್ರಮುಖ ಗೂಢಚಾರ ಸಂಸ್ಥೆ ಎನ್‌ಎಸ್‌ಎ (National Security Agency)ಗೆ ಗೂಢಚಾರಿಕೆಯ ನೇತೃತ್ವ ವಹಿಸಲಾಗಿತ್ತು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಎನ್‌ಎಸ್‌ಎ ಗುತ್ತಿಗೆ ಸಂಸ್ಥೆಯೊಂದರ ಐಟಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ನೋಡೆನ್ ಇತ್ತೀಚೆಗೆ ಬಹಿರಂಗ ಪಡಿಸಿದ್ದ ಅಮೆರಿಕದ ರಕ್ಷಣಾ ಇಲಾಖೆಯ ರಹಸ್ಯ ದಾಖಲೆಗಳಲ್ಲಿ ಈ ಅಂಶಪತ್ತೆಯಾಗಿದೆ ಎಂದು ಹೇಳಲಾಗಿದೆ. ಅಮೆರಿಕದ 'ವಿದೇಶಿ ಗೂಢಾಚಾರ ನ್ಯಾಯಾಲಯ'ದ ಅನುಮತಿ ಆದೇಶದಲ್ಲಿ ವಿಶ್ವದ ಒಟ್ಟು 193 ವಿದೇಶಿ ಸರ್ಕಾರ, ಆ ದೇಶಗಳ ವಿದೇಶಾಂಗ ಇಲಾಖೆಗಳು ಕೂಡ ಗೂಢಚಾರಿಕೆಗೆ ಒಳಪಟ್ಟಿವೆ.

2010ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಗ ಬಿಜೆಪಿ ಪ್ರತಿಪಕ್ಷ ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ. ಅಮೆರಿಕದ ಗೂಢಚಾರಿಕೆ ಕುರಿತಂತೆ ಅಂದೇ ಅನುಮಾನ ವ್ಯಕ್ತಪಡಿಸಿದ್ದ ಬಿಜೆಪಿ, ಅಮೆರಿಕದ ವಿರುದ್ಧ ಕಿಡಿಕಾರಿತ್ತು. ಇದೀಗ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತದಲ್ಲಿದ್ದು, ಪ್ರಕರಣವನ್ನು ಹೇಗೆ ಪರಿಗಣಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ದೊಡಣ್ಣನ ಗೂಢಚಾರಿಕೆ ಪಟ್ಟಿಯಲ್ಲಿ ನಾಲ್ಕು ರಾಷ್ಟ್ರಗಳ ಹೆಸರಿಲ್ಲ

ಇನ್ನು 'ಸ್ನೋಡೆನ್‌' ದಾಖಲೆಗಳ ಪ್ರಕಾರ ಅಮೆರಿಕದ ಗೂಢಚಾರಿಕಾ ಪಟ್ಟಿಯಂದ ವಿಶ್ವದ ನಾಲ್ಕು ಪ್ರಮುಖ ರಾಷ್ಟ್ರಗಳನ್ನು ಹೊರತು ಪಡಿಸಿ ಉಳಿದೆಲ್ಲ ರಾಷ್ಟ್ರಗಳು ಒಂದಲ್ಲ ಒಂದು ವಿಭಾಗದಲ್ಲಿ ಗೂಢಚಾರಿಕೆಗೆ ಒಳಪಟ್ಟಿವೆ. ಆದರೆ ಅಮೆರಿಕದ ಪರಮಾಪ್ತ ರಾಷ್ಟ್ರಗಳೆಂದು ಹೇಳಲಾಗುತ್ತಿರುವ ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಪಟ್ಟಿಯಿಂದ ಹೊರತಾಗಿವೆ.

ಎನ್‌ಎಸ್‌ಎ ತಿದ್ದುಪಡಿ ಕಾಯ್ದೆಯಂತೆ ವಿದೇಶಿ ಸರ್ಕಾರ ಮತ್ತು ಸಂಸ್ಥೆಗಳ ಮೇಲೆ ನಿಗಾವಹಿಸಲು ಪ್ರತಿ ವರ್ಷ ಎನ್‌ಎಸ್‌ಎ 'ವಿದೇಶಿ ಗೂಢಚಾರ ನ್ಯಾಯಾಲಯ'ದ ಮುಂದೆ ತನ್ನ ವಾದ ಮಂಡಿಸಿ ಅನಂತರ ಅನುಮತಿ ಪಡೆಯಬೇಕಿದೆ. ಈ ಅನುಮತಿಯು ಒಂದು ವರ್ಷಕ್ಕೆ ಸೀಮಿತವಾಗಿದ್ದು, ಮುಂದಿನ ವರ್ಷ ನವೀಕರಿಸಿಕೊಳ್ಳಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement