ಅಂಬರೀಶ್ ಆರೋಗ್ಯದಲ್ಲಿ ಚೇತರಿಕೆ
ಸಿಂಗಾಪುರ ಆಸ್ಪತ್ರೆಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಸುಮಲತಾ
ಸಿಂಗಾಪುರ: ಅನಾರೋಗ್ಯಕ್ಕೆ ತುತ್ತಾಗಿ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಸತಿ ಸಚಿವ ಮತ್ತು ನಟ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರ ಪತ್ನಿ ಸುಮಲತಾ ಅವರು ಹೇಳಿದ್ದಾರೆ.
ಸಿಂಗಾಪುರ ಆಸ್ಪತ್ರೆಯಿಂದ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುಮಲತಾ ಅವರು, ವದಂತಿಗೆ ಕಿವಿಗೊಡದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 'ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರಿಗೆ 12 ರಿಂದ 15 ದಿನಗಳವರೆಗೆ ವಿಶ್ರಾಂತಿ ಅಗತ್ಯವಿದೆ. ಆ ಬಳಿಕ ಅವರು ಬೆಂಗಳೂರಿಗೆ ಬರುತ್ತಾರೆ' ಎಂದು ಸುಮಲತಾ ಹೇಳಿದ್ದಾರೆ.
ಇದೇ ವೇಳೆ ಅಂಬರೀಶ್ ಆರೋಗ್ಯದ ಕುರಿತು ಕಿಡಿಗೇಡಿಗಳು ಹಬ್ಬಿಸುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿರುವ ಸುಮಲತಾ ಅವರು, 'ವದಂತಿಗಳೆಲ್ಲಾ ಸುಳ್ಳು, ಅಂಬಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹೀಗಾಗಿ ಯಾರೂ ಕೂಡ ಇಂತಹ ವದಂತಿಗಳನ್ನು ಹಬ್ಬಿಸಬಾರದು' ಎಂದು ಮನವಿ ಮಾಡಿದ್ದಾರೆ.
ಕಳೆದ ಹಲವು ದಿನಗಳಿಂದ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಂಬರೀಶ್ ಅವರನ್ನು ನಟ ರಜನಿಕಾಂತ್ ಅವರ ಸಲಹೆಯ ಮೇರೆಗೆ ಸಿಂಗಾಪುರದಲ್ಲಿರುವ ಮೌಂಟ್ ಎಲಿಜೆಬೆತ್ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಕ್ರಮ್ ಆಸ್ಪತ್ರೆಯ ಇಬ್ಬರು ವೈದ್ಯರು ಅಂಬರೀಶ್ ಅವರನ್ನು ಸಿಂಗಾಪುರಕ್ಕೆ ಕರೆದೊಯ್ದಿದ್ದರು. ನಿನ್ನೆ ಮಧ್ಯಾಹ್ನ 12 ಗಂಟೆಯ ವೇಳೆಗೆ ಏರ್ ಆಂಬುಲೆನ್ ಮೂಲಕವಾಗಿ ಅಂಬರೀಶ್ ಅವರನ್ನು ಮೌಂಟ್ ಎಲಿಜೆಬೆತ್ ಆಸ್ಪತ್ರಗೆ ದಾಖಲಿಸಲಾಗಿತ್ತು.