ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಿಜೆಪಿ ಸುನಾಮಿಗೆ ಕಾಂಗ್ರೆಸ್, ಎಸ್‌ಪಿ ಧೂಳಿಪಟ: ಮೋದಿ

ಬಿಜೆಪಿ ಸುನಾಮಿಗೆ ಕಾಂಗ್ರೆಸ್, ಎಸ್.ಪಿ ಪಕ್ಷಗಳು ಧೂಳಿಪಟವಾಗಲಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

Srinivasa Murthy VN
Updated On : 2 Mar 2014, 4:19 am

ಲಖ್ನೋ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸುನಾಮಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳು ಧೂಳಿಪಟವಾಗಲಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಲಖ್ನೋದಲ್ಲಿ ನಡೆಯುತ್ತಿರುವ 'ವಿಜಯ ಶಂಖನಾದ ರ್ಯಾಲಿ'ಯನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ದೇಶಾದ್ಯಂತ ಬಿಜೆಪಿ ಅಲೆ ಬೀಸುತ್ತಿದ್ದು, ಉತ್ತರ ಪ್ರದೇಶದಲ್ಲಿಯೂ ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಮತ್ತು ಎಸ್.ಪಿ ಪಕ್ಷಗಳು ಧೂಳಿಪಟವಾಗಲಿದೆ. ಈಗಾಗಲೇ ಎಸ್.ಪಿ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಸೋಲೊಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದರು.

ಮುಲಾಯಂ ಸಿಂಗ್ ಯಾದವ್ ಅವರು ಬಿಜೆಪಿಯನ್ನು ಟೀಕಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಗುಜರಾತ್‌ನಲ್ಲಿ ಯಾವುದೇ ಕೋಮು ಗಲಭೆಗಳಾಗಿಲ್ಲ. ಆದರೆ ಉತ್ತರ ಪ್ರದೇದಲ್ಲಿ 150 ಕ್ಕೂ ಹೆಚ್ಚು ಗಲಭೆ ಪ್ರಕರಣಗಳು ದಾಖಲಾಗಿವೆ. ಈಗ ಹೇಳಿ ಕೋಮುವಾದಿಗಳು ಯಾರೆಂದು..? ರಾಜಕೀಯ ಅಸ್ಥಿರತೆಯಿಂದಾಗಿ ಉತ್ತರ ಪ್ರದೇಶದ ಜನತೆ ನರಳುತ್ತಿದ್ದಾರೆ. ಉತ್ತರ ಪ್ರದೇಶ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಆದರೆ ಇಲ್ಲಿ ಪ್ರಜಾಪ್ರಭುತ್ವದ ಬದಲಿಗೆ ಗೂಂಡಾಗಳ ಮತ್ತು ರೌಡಿಗಳ ಪ್ರಭುತ್ವ ಅಧಿಕಾರ ನಡೆಸುತ್ತಿವೆ.

ಸಮಾಜವಾದಿ ಪಕ್ಷ ಮತ್ತು ಮುಲಾಯಂ ಸಿಂಗ್ ಯಾದವ್ ಅವರು ವೋಟ್ ಬ್ಯಾಂಕ್ ರಾಜಕಾರಣದಲ್ಲಿ ನಿರತರಾಗಿದ್ದು, ರಾಜ್ಯದ ಅಭಿವೃದ್ದಿ ಕಡೆ ಸ್ವಲ್ಪವೂ ಗಮನ ಹರಿಸುತ್ತಿಲ್ಲ. ಎಸ್‌ಪಿ ಎಂದರೆ ಸಮಾಜವಾದಿ ಪಾರ್ಟಿ ಅಲ್ಲ. ಬದಲಿಗೆ ಸಮಾಜ ವಿರೋಧಿ ಪಕ್ಷ ಮತ್ತು ಸುಖವಾದಿ ಪಕ್ಷ. ಹೀಗಾಗಿಯೇ ಇಡೀ ರಾಜ್ಯ ಗೂಂಡಾ ರಾಜ್ಯವಾಗಿದೆ ಎಂದು ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಸೈನಿಕರಿಗೆ ಪಿಂಚಣಿ ಮತ್ತು ಭಡ್ತಿ ನೀಡಿದ್ದೇವೆ ಎನ್ನುವ ಮೂಲಕ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ: ವಿ.ಕೆ.ಸಿಂಗ್
ಇದೇ ವೇಳೆ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ನಿವೃತ್ತ ಭೂಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರು, ಸೈನಿಕರ ಅಭಿವೃದ್ದಿ ವಿಚಾರವಾಗಿ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳಿದರು. ಸೈನಿಕರ ವಿಚಾರವಾಗಿ ಕಾಂಗ್ರೆಸ್ ಪಕ್ಷಕ್ಕೆ ಎಳ್ಳಷ್ಟೂ ಚಿಂತೆ ಇಲ್ಲ. ಹೀಗಾಗಿಯೇ ನೌಕಾದಳದ ಮುಖ್ಯಸ್ಥರಾದ ಜಿ.ಕೆ.ಜೋಷಿ ಅವರು ತಮ್ಮ ಸ್ಥಾನವನ್ನು ತ್ಯಜಿಸಿದ್ದಾರೆ. ಸೈನಿಕರಿಗೆ ಭಡ್ತಿ ಮತ್ತು ಪಿಂಚಣಿ ನೀಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡರು ದೇಶದ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಿ.ಕೆ.ಸಿಂಗ್ ಹೇಳಿದರು.

ನಮ್ಮನ್ನು ಮೂರ್ಖರೆಂದು ತಿಳಿಯಬೇಡಿ: ಮೋದಿಗೆ ಮುಲಾಯಂ ತಿರುಗೇಟು
ಇದೇ ವೇಳೆ ಅಲಹಾಬಾದ್‌ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಬಿಜೆಪಿ ಪ್ರಧಆನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನರೇಂದ್ರ ಮೋದಿ ಅವರು ನಮ್ಮನ್ನು ಮೂರ್ಖರೆಂದು ಭಾವಿಸಿದಂತಿದೆ. ಗುಜರಾತ್‌ನಲ್ಲಿ ಮುಸ್ಲಿಮರ ಮಾರಣಹೋಮ ನಡೆಸಿ ನಂತರ ಕ್ಷಮಿಸಿ ಎನ್ನುತ್ತಾರೆ ಎಂದು ಮುಲಾಯಂ ಸಿಂಗ್ ಕಿಡಿಕಾರಿದರು.

ಒಟ್ಟಾರೆ ಇಂದು ಲಖ್ನೋದಲ್ಲಿ ನಡೆದ ನರೇಂದ್ರ ಮೋದಿ ಅವರ ವಿಜಯಶಂಖಾನಾದ ರ್ಯಾಲಿಗೆ ಲಕ್ಷಾಂತರ ಜನರು ಆಗಮಿಸಿದ್ದು, ರ್ಯಾಲಿಗಾಗಿಯೇ ಉತ್ತರ ಪ್ರದೇಶ ಬಿಜೆಪಿ ಕಾರ್ಯಕರ್ತರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು. ರ್ಯಾಲಿಗಾಗಿ 29 ರೈಲುಗಳು, 4,500 ಬಸ್‌ಗಳು ಮತ್ತು 25 ಸಾವಿರ ಕಾರು-ಜೀಪ್‌ಗಳು ಮತ್ತು 50 ಸಾವಿರ ಬೈಕ್‌ಗಳಲ್ಲಿ ಜನರು ತಂಡೋಪತಂಡವಾಗಿ ಆಗಮಿಸಿದ್ದರು. ವಾಹನಗಳ ನಿಲುಗಡೆಗಾಗಿಯೇ ವಿಶೇಷವಾಗಿ ಮೈದಾನದ ಹೊರಗಡೆ ಹಲವು ಪ್ರದೇಶಗಳಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement