ಮಲೇಷ್ಯಾ ವಿಮಾನ ನಾಪತ್ತೆ: ಹುಡುಕಾಟಕ್ಕೆ ತಾತ್ಕಾಲಿಕ ಬ್ರೇಕ್
ವಾರದ ಹಿಂದೆ ನಾಪತ್ತೆಯಾಗಿದ್ದ ಮಲೇಷ್ಯಾ ಏರ್ಲೈನ್ಸ್ ವಿಮಾನ ಹುಡುಕಾಟ ಕಾರ್ಯಾಚರಣೆಗೆ ಭಾರತ ತಾತ್ಕಾಲಿಕ್ ಬ್ರೇಕ್ ಹಾಕಿದೆ.
ಕೌಲಾಂಪುರ: ವಾರದ ಹಿಂದೆ ನಾಪತ್ತೆಯಾಗಿದ್ದ ಮಲೇಷ್ಯಾ ಏರ್ಲೈನ್ಸ್ ವಿಮಾನ ಹುಡುಕಾಟ ಕಾರ್ಯಾಚರಣೆಗೆ ಭಾರತ ತಾತ್ಕಾಲಿಕ್ ಬ್ರೇಕ್ ಹಾಕಿದೆ.
ವಿಮಾನ ಪತ್ತೆ ಕಾರ್ಯಾಚರಣೆಯಲ್ಲಿ ಮಲೇಷ್ಯಾ ಸರ್ಕಾರಕ್ಕೆ ನೆರವು ನೀಡಿದ್ದ ಭಾರತೀಯ ರಕ್ಷಣಾ ಇಲಾಖೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಹುಡುಕಾಟ ನಡೆಸುತ್ತಿತ್ತು. ವಿಮಾನ ನಾಪತ್ತೆಯಾಗಿ 9 ದಿನಗಳು ಕಳೆದರೂ ಇದುವರೆಗೂ ವಿಮಾನದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ನಿನ್ನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ಮಲೇಷ್ಯಾ ಸರ್ಕಾರ ವಿಮಾನದ ಪೈಲಟ್ನಿಂದಲೇ ವಿಮಾನದ ಹೈಜಾಕ್ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿತ್ತು.
ಈ ಹಿನ್ನಲೆಯಲ್ಲಿ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡುವಂತೆ ಮಲೇಷ್ಯಾ ಸರ್ಕಾರ ಭಾರತವನ್ನು ಮನವಿ ಮಾಡಿದ ಹಿನ್ನಲೆಯಲ್ಲಿ ಭಾರತ ಸರ್ಕಾರ ಹುಡುಕಾಟ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಹಾಕಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ರಕ್ಷಣಾ ಇಲಾಖೆ, 'ನಾವು ಮಲೇಷ್ಯಾ ಸರ್ಕಾರದ ಸೂಚನೆಗಾಗಿ ಕಾಯುತ್ತಿದ್ದೇವೆ. ನಮ್ಮ ಹುಡುಕಾಟ ಕಾರ್ಯಾಚರಣೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕೇ ಅಥವಾ ಕಾರ್ಯಾಚರಣೆಯ ವ್ಯಾಪ್ತಿಯನ್ನು ವಿಸ್ತರಿಸಬೇಕೇ ಎನ್ನುವ ಕುರಿತು ಮಲೇಷ್ಯಾ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕಿದೆ. ಮಲೇಷ್ಯಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಹಕಾರ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಅಂತಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ'.
'ಈಗಾಗಲೇ ನಮ್ಮ ನೌಕಾದಳ ಮತ್ತು ವಾಯುದಳಗಳ ವಿಮಾನಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿ ಮತ್ತು ಬಂಗಾಳಕೊಲ್ಲಿಯಲ್ಲಿ ಗಸ್ತು ತಿರುಗುತಿದ್ದು, ವಿಮಾನಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿವೆ' ಎಂದು ಹೇಳಿದೆ.
ಕಳೆದ ಮಾರ್ಚ್ 8ರಂದು ನಾಪತ್ತೆಯಾಗಿದ್ದ ಮಲೇಷ್ಯಾ ಏರ್ಲೈನ್ಸ್ ವಿಮಾನ ಪ್ರಕರಣ ನಿಗೂಢವಾಗಿಯೇ ಉಳಿದಿದ್ದು, ದಿನಕ್ಕೊಂದು ತಿರುವು ಪಡೆಯುತ್ತಿದೆ. ಸ್ವತಃ ಮಲೇಷ್ಯಾ ಸರ್ಕಾರ ಕೂಡ ಪ್ರಕರಣದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಎನ್ನುವ ಕುರಿತು ದ್ವಂದ್ವಕ್ಕೊಳಗಾಗಿದೆ.
ಮಾರ್ಚ್ 8ರಂದು ನಾಪತ್ತೆಯಾಗಿದ್ದ ಮಲೇಷ್ಯಾ ಏರ್ಲೈನ್ಸ್ ವಿಮಾನ ಎಂ.ಹೆಚ್.370 ಬೋಯಿಂಗ್ 777 ವಿಮಾನ ಫೆಸಿಫಿಕ್ ಮಹಾಸಾಗರದ ಬಳಿ ನಾಪತ್ತೆಯಾಗಿತ್ತು. ವಿಮಾನ ಹುಡುಕಾಟ ಕಾರ್ಯಾಚರಣೆಗೆ ಅಮೆರಿಕ, ಚೀನಾ ದೇಶಗಳು ಸೇರಿದಂತೆ ಭಾರತ ಕೂಡ ಮಲೇಷ್ಯ ಸರ್ಕಾರಕ್ಕೆ ನೆರವು ನೀಡಿತ್ತು. ಭಾರತದ ವಾಯುದಳ ಮತ್ತು ನೌಕಾದಳಕ್ಕೆ ಸೇರಿದ ಸುಮಾರು 60 ವಿಮಾನಗಳು ಮತ್ತು 45 ನೌಕೆಗಳು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ತೀವ್ರ ಹುಡುಕಾಟ ಕಾರ್ಯಾಚರಣೆಯಲ್ಲಿ ತೊಡಗಿವೆ.