ಪತ್ರಕರ್ತ ಮತ್ತು ನಿರ್ಮಾಪಕ ಸನತ್ ಕುಮಾರ್ ನಿಧನ
ಪತ್ರಕರ್ತ ಮತ್ತು ಚಿತ್ರ ನಿರ್ಮಾಪಕ ಸನತ್ ಕುಮಾರ್ ಅವರು ನಿಧನರಾಗಿದ್ದಾರೆ.
ಬೆಂಗಳೂರು: ಪತ್ರಕರ್ತ ಮತ್ತು ಚಿತ್ರ ನಿರ್ಮಾಪಕ ಸನತ್ ಕುಮಾರ್ ಅವರು ನಿಧನರಾಗಿದ್ದಾರೆ.
ಸಕ್ಕರೆ ಖಾಯಿಲೆ ಮತ್ತು ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತಿದ್ದ ಸನತ್ ಕುಮಾರ್ ಅವರನ್ನು ಮಂಗಳವಾರ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸನತ್ ಕುಮಾರ್ ಅವರು ಬುಧವಾರ ನಿಧನರಾಗಿದ್ದಾರೆ. ಸಾಹಿತಿ ಮತ್ತು ಪತ್ರಕರ್ತ ದಿ.ವೈಕುಂಠ ರಾಜು ಅವರ ಪುತ್ರರಾಗಿರುವ ಸನತ್ ಕುಮಾರ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಪತ್ರಿಕಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಚಿಕ್ಕವಯಸ್ಸಿನಲ್ಲಿಯೇ 'ರಾಜು ಪತ್ರಿಕೆ'ಯ ಸಂಪಾದಕರಾಗಿದ್ದ ಸನತ್ ಕುಮಾರ್ ಅವರು, ನಂತರ ಕಿರುಚಿತ್ರ ತಯಾರಿಕೆಯಲ್ಲಿ ತೊಡಗಿದರು. ತಮ್ಮದೇ ನಿರ್ದೇಶನದ ಕಿರುಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಪಡೆದರು. ನಂತರ ಆಸ್ಟ್ರೇಲಿಯಾದ ರೇಡಿಯೋಗೆ ಭಾರತ ವರದಿಗಾರರರಾಗಿ ಸೇವೆಸಲ್ಲಿಸಿದ್ದರು. ತಮ್ಮ ಪತ್ರಿಕಾ ವೃತ್ತಿಯನ್ನು ಮುಂದುವರೆಸುತ್ತಲೇ ಚಿತ್ರರಂಗದತ್ತ ಮುಖ ಮಾಡಿದ್ದ ಸನತ್ ಕುಮಾರ್ ಅವರು 2009ರಲ್ಲಿ 'ಎದ್ದೇಳು ಮಂಜುನಾಥ' ಚಿತ್ರವನ್ನು ನಿರ್ಮಾಣ ಮಾಡಿದ್ದರು.