ಬಿಕ್ಕಟ್ಟು ಶಮನ, ಗಾಂಧಿನಗರದಿಂದಲೇ ಆಡ್ವಾಣಿ ಸ್ಪರ್ಧೆ
ಗುಜರಾತ್ ನ ಗಾಂಧಿನಗರದಿಂದ ಸ್ಪರ್ಧಿಸಲು ಕೊನೆಗೂ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ತಮ್ಮ ಸಮ್ಮತಿ ಸೂಚಿಸಿದ್ದಾರೆ.
ನವದೆಹಲಿ: ಆಡ್ವಾಣಿ ಸ್ಪರ್ಧೆ ಕುರಿತು ಬಿಜೆಪಿಯಲ್ಲಿ ಉಂಟಾಗಿದ್ದ ಬಿಕ್ಕಟ್ಟು ಶಮನವಾಗಿದ್ದು, ಗುಜರಾತ್ ನ ಗಾಂಧಿನಗರದಿಂದ ಸ್ಪರ್ಧಿಸಲು ಕೊನೆಗೂ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ತಮ್ಮ ಸಮ್ಮತಿ ಸೂಚಿಸಿದ್ದಾರೆ.
ಗಾಂಧಿನಗರದಿಂದಲೇ ಸ್ಪರ್ಧಿಸುವಂತೆ ಬಿಜೆಪಿ ಹೈಕಮಾಂಡ್ ನ ಒತ್ತಡ ಮತ್ತು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಲಹೆ ಮೇರೆಗೆ ಎಲ್.ಕೆ.ಆಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇಂದು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಆಡ್ವಾಣಿ ಅವರು, ಪಕ್ಷದ ತೀರ್ಮಾನದಂತೆ ತಾವು ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
'ಇಂದು ಬೆಳಗ್ಗೆ ನರೇಂದ್ರ ಮೋದಿ ಅವರು ನನ್ನ ನಿವಾಸಕ್ಕೆ ಬಂದು ನಾನು ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ ರಾಷ್ಟ್ರಾಧ್ಯಕ್ಷರಾದ ರಾಜನಾಥ್ ಸಿಂಗ್ ಅವರು ಗಾಂಧಿನಗರ ಮತ್ತು ಭೋಪಾಲ್ ಕ್ಷೇತ್ರಗಳ ಆಯ್ಕೆಯನ್ನು ನನಗೆ ವಹಿಸಿದ್ದರು. ಅವರ ಸಲಹೆಯಂತೆ ಮತ್ತು ಪಕ್ಷದ ತೀರ್ಮಾನದಂತೆ ನಾನು ಗಾಂಧಿನಗರ ಕ್ಷೇತ್ರದಿಂಲೇ ಸ್ಪರ್ಧಿಸುತ್ತೇನೆ' ಎಂದು ಆಡ್ವಾಣಿ ಹೇಳಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಕಳೆದ 5 ಬಾರಿ ತಾವು ಪ್ರತಿನಿಧಿಸಿದ್ದ ಗುಜರಾತ್ ಗಾಂಧಿನಗರ ಕ್ಷೇತ್ರವನ್ನು ತೊರೆದು ಮಧ್ಯ ಪ್ರದೇಶದ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ತಮ್ಮ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನಡುವಿನ ಬಿಕ್ಕಟ್ಟಿನಿಂದಾಗಿಯೇ ಆಡ್ವಾಣಿ ಅವರು ತಮ್ಮ ಕ್ಷೇತ್ರವನ್ನು ಬದಲಿಸಲು ಮುಂದಾಗಿದ್ದಾರೆ ಎಂಬ ಟೀಕೆಗಳು ಕೇಳಿ ಬರುತ್ತಿದ್ದಂತೆಯೇ ಅವರನ್ನು ಸಂತೈಸುವ ಕೆಲಸಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಯಿತು.
ನಿನ್ನೆ ಈ ಬಗ್ಗೆ ಪಕ್ಷದ ಕಚೇರಿಯಲ್ಲಿ ಸಭೆ ಕರೆದಿದ್ದ ಬಿಜೆಪಿ, ಆಡ್ವಾಣಿ ಅವರು, ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಿತು. ಅಲ್ಲದೆ ಪಕ್ಷದ ತೀರ್ಮಾನವನ್ನು ಆಡ್ವಾಣಿ ಅವರಿಗೆ ಮುಟ್ಟಿಸುವ ಜವಾಬ್ದಾರಿಯನ್ನು ಮತ್ತೋರ್ವ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರಿಗೆ ನೀಡಲಾಯಿತು. ಆಡ್ವಾಣಿ ಅವರನ್ನು ಭೇಟಿ ಮಾಡಿದ ಸುಷ್ಮಾ ಸ್ವರಾಜ್ ಅವರು ಪಕ್ಷದ ತೀರ್ಮಾನವನ್ನು ಸ್ಪಷ್ಟಪಡಿಸಿದ್ದಲ್ಲದೇ, ಅವರ ಮನವೊಲಿಸುವ ಕಾರ್ಯಕ್ಕೆ ಮುಂದಾದರು. ಆದರೆ ಆಡ್ವಾಣಿ ಮಾತ್ರ ತಮ್ಮ ನಿಲುವು ಬದಲಿಸಲಿಲ್ಲ.
ಕೊನೆಗೆ ಇಂದು ಬೆಳಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಅಡ್ವಾಣಿ ನಿವಾಸಕ್ಕೆ ತೆರಳಿ, ಮಾತುಕತೆ ನಡೆಸಿದರಾದರೂ ಫಲಕಾರಿಯಾಗಲಿಲ್ಲ. ಆಡ್ವಾಣಿ ಅವರ ಈ ನಿರ್ಧಾರ ಬಿಜೆಪಿಗೆ ಇರಿಸುಮುರಿಸು ಉಂಟಾಮಾಡಿತು.
ಬಿಕ್ಕಟ್ಟು ಶಮನಕ್ಕೆ ಆರ್ ಎಸ್ಎಸ್ ಮಧ್ಯಪ್ರವೇಶ
ಈ ನಡುವೆ ಸಂದರ್ಭದ ಗಂಭೀರತೆಯನ್ನು ಅರಿತ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು ಸಭೆ ನಡೆಸಿ, ಎಲ್ಲರೂ ಒಗ್ಗೂಡಿ ವಿವಾದವನ್ನು ಬಗೆಹರಿಸುವಂತೆ ತಿಳಿ ಹೇಳಿದರು. ಕೊನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಕ್ಷೇತ್ರದ ಆಯ್ಕೆ ನಿರ್ಧಾರವನ್ನು ಆಡ್ವಾಣಿ ಅವರಿಗೆ ನೀಡಿದರು. ಅಲ್ಲದೆ ಯಾವುದೇ ಹಂತದಲ್ಲಿಯೂ ಆಡ್ವಾಣಿ ಅವರನ್ನು ಮೂಲೆಗುಂಪು ಮಾಡಿಲ್ಲ ಎಂದು ಹೇಳಿದರು.
ಇದೀಗ ಪಕ್ಷದ ತೀರ್ಮಾನದಂತೆ ಮತ್ತು ಮೋಹನ್ ಭಾಗವತ್ ಅವರ ಸಲಹೆಯಂತೆ ಎಲ್.ಕೆ.ಆಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದಾರೆ.