ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ನಮೋ' ಭೇಟಿಯಾದ ಪವನ್ ಕಲ್ಯಾಣ್

ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನೂತನ 'ಜನಸೇನಾ' ಪಕ್ಷವನ್ನು ಸ್ಥಾಪಿಸಿದ್ದ ನಟ ಪವನ್ ಕಲ್ಯಾಣ್ ಅವರು ಶುಕ್ರವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

Srinivasa Murthy VN
Updated On : 21 Mar 2014, 6:27 am

ಅಹಮದಾಬಾದ್: ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನೂತನ 'ಜನಸೇನಾ' ಪಕ್ಷವನ್ನು ಸ್ಥಾಪಿಸಿದ್ದ ನಟ ಪವನ್ ಕಲ್ಯಾಣ್ ಅವರು ಶುಕ್ರವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಗುಜರಾತ್ ಅಹಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿದೆ ಪವನ್ ಕಲ್ಯಾಣ್ ಅವರು ಸುಮಾರು 1 ಗಂಟೆಕಾಲ ಚರ್ಚಿಸಿದ್ದಾರೆ. ಆಂಧ್ರ ಪ್ರದೇಶ ವಿಭಜನೆ, ರಾಜ್ಯದಲ್ಲಿರುವ ಪ್ರಮುಖ ಸಮಸ್ಯೆಗಳ ಕುರಿತು ನರೇಂದ್ರ ಮೋದಿ ಅವರೊಂದಿಗೆ ಪವನ್ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ತಾವು ನೂತನವಾಗಿ ಸ್ಥಾಪಿಸಿರುವ 'ಜನಸೇನಾ' ಪಕ್ಷದ ಕುರಿತು ಮತ್ತು ಪಕ್ಷದೆ ಅಜೆಂಡಾ ಕುರಿತು ನರೇಂದ್ರ ಮೋದಿ ಅವರಿಗೆ ಪವನ್ ಮನವರಿಕೆ ಮಾಡಿಕೊಟ್ಟಿದ್ದು, ತಾವು ಬಿಜೆಪಿಗೆ ಬೆಂಬಲ ನೀಡಲು ಸಿದ್ಧವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಕಾರ್ಯ ನಿರ್ವಹಿಸಲು ಸಿದ್ದ ಎಂದೂ ಸಹ ಪವನ್ ಕಲ್ಯಾಣ್ ನರೇಂದ್ರ ಮೋದಿ ಅವರಿಗೆ ಸ್ಪಷ್ಟಪಡಿಸಿದ್ದಾರೆ.

ಪವನ್ ಕಲ್ಯಾಣ್ ಅವರ ಪ್ರಸ್ತಾಪಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸಕಾರತ್ಮಕವಾಗಿ ಪ್ರತಿಕ್ರಿಯಿಸಿದ್ದು, ಆಂಧ್ರ ಪ್ರದೇಶ ಬಿಜೆಪಿ ಮುಖಂಡರೊಡನೆ ಈ ಕುರಿತು ಚರ್ಚಿಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾರಾಜ್ಯಂ ಪಕ್ಷದ ಸಂಸ್ಥಾಪಕ ಮತ್ತು ಕೇಂದ್ರ ಪ್ರವಾಸೋಧ್ಯಮ ಸಚಿವ ಚಿರಂಜೀವಿ ಅವರ ಕಿರಿಯ ಸಹೋದರ ಕೂಡ ಆಗಿರುವ ಪವನ್ ಕಲ್ಯಾಣ್ ಅವರು ಇದೇ ಮಾರ್ಚ್ 14ರಂದು ಹೈದರಾಬಾದ್ ನಲ್ಲಿ ನೂತನ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು. ಪಕ್ಷ ಸ್ಥಾಪನೆಯ ಸಂದರ್ಭದಲ್ಲಿಯೇ ತಾವು ಕಾಂಗ್ರೆಸ್ ವಿರೋಧಿ ಎಂದು ಹೇಳಿದ್ದ ಪವನ್, ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಬೇರಾವುದೇ ಪಕ್ಷದೊಂದಿಗೆ ಕೈಜೋಡಿಸಲು ಸಿದ್ಧ ಎಂದು ಘೋಷಣೆ ಮಾಡಿದ್ದರು.

ಇದೀಗ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಪವನ್ ಕಲ್ಯಾಣ್ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚಿಸಿದ್ದಾರೆ.

'ಜನಸೇನಾ' ಪಕ್ಷ ಸ್ಥಾಪನೆಯ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರ 'ಕಾಂಗ್ರೆಸ್ ವಿರೋಧಿ' ಘೋಷಣೆ ಹೊರಬೀಳುತ್ತಿದ್ದಂತೆಯೇ ಇತ್ತ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಪವನ್ ತಮ್ಮ ಟಿಡಿಪಿ ಪಕ್ಷದೊಂದಿಗೆ ಕೈಜೋಡಿಸಬಹುದು ಎಂದು ಆಹ್ವಾನ ನೀಡಿದ್ದರು. ಅಲ್ಲದೆ ಆಂಧ್ರ ಪ್ರದೇಶದಲ್ಲಿ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಪಕ್ಷಗಳ ಮೈತ್ರಿಕೂಟ ಶೀಘ್ರದಲ್ಲಿಯೇ ರಚನೆಯಾಗಬಹುದು ಎಂದು ಹೇಳಿದ್ದರು.

ಸಹೋದರನಾಗಿ ಪವನ್ಗೆ ನನ್ನ ಆಶೀರ್ವಾದವಿದೆ ಆದರೆ ರಾಜಕಾರಣಿಯಾಗಿ ಆತ ನನ್ನ ಎದುರಾಳಿ: ಚಿರಂಜೀವಿ
ಈ ನಡುವೆ ಪವನ್ ಕಲ್ಯಾಣ್ ಅವರ ರಾಜಕೀಯ ಪ್ರವೇಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಪವನ್ ಕಲ್ಯಾಣ್ ರ ಹಿರಿಯ ಸಹೋದರ ಮತ್ತು ಕೇಂದ್ರ ಪ್ರವಾಸೋಧ್ಯಮ ಸಚಿವ ಚಿರಂಜೀವಿ ಅವರು, ಸಹದರನಾಗಿ ಪವನ್ ಕಲ್ಯಾಣ್ ಗೆ ನನ್ನ ಆಶೀರ್ವಾದ ಸದಾ ಇರುತ್ತದೆ. ಆದರೆ ಓರ್ವ ರಾಜಕಾರಣಿಯಾಗಿ ಆತ ನನ್ನ ಎದುರಾಳಿ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ನನ್ನ ಗುರಿ. ಪವನ್ ಕಲ್ಯಾಣ್ ನನ್ನು ಕೂಡ ಇತರೆ ರಾಜಕೀಯ ವೈರಿಗಳಂತೆಯೇ ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ಒಟ್ಟಾರೆ ಆಂಧ್ರ ಪ್ರದೇಶ ರಾಜಕಾರಣದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ದೊಡ್ಡ ಹೆಸರು ಮಾಡಿರುವ 'ಮೆಗಾ ಫ್ಯಾಮಿಲಿ'ಯಲ್ಲಿ ರಾಜಕೀಯದಿಂದಾಗಿ ಬಿರುಕು ಮೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement