ಶಕ್ತಿಮಿಲ್ಸ್ ಅತ್ಯಾಚಾರ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ
ಮುಂಬೈನ ಶಕ್ತಿಮಿಲ್ಸ್ನಲ್ಲಿ ನಡೆದಿದ್ದ 2 ಪ್ರತ್ಯೇಕ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ ನಾಲ್ಕು ಮಂದಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಮುಂಬೈ: ಮುಂಬೈನ ಶಕ್ತಿಮಿಲ್ಸ್ನಲ್ಲಿ ನಡೆದಿದ್ದ 2 ಪ್ರತ್ಯೇಕ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ ನಾಲ್ಕು ಮಂದಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರಕರಣ ಸಂಬಂಧ ನಿನ್ನೆ ನಡೆದಿದ್ದ ಅಂತಿಮ ವಿಚಾರಣೆಯಲ್ಲಿ ನಾಲ್ಕು ಆರೋಪಿಗಳನ್ನು ಅಪರಾಧಿಗಳು ಎಂದಿದ್ದ ನ್ಯಾಯಾಲಯ, ಇಂದು ಈ ಎಲ್ಲ ನಾಲ್ಕು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪೈಕಿ ಮೂವರು ಆರೋಪಿಗಳು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ವಿಜಯ್ ಜಾಧವ್ (19 ವರ್ಷ), ಮಹಮದ್ ಖಾಸಿಮ್ ಶೇಖ್ (21), ಮಹಮದ್ ಅನ್ಸಾರಿ (28) ಎಂಬ ಮೂವರು ಆರೋಪಿಗಳು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಟೆಲಿಫೋನ್ ಆಪರೇಟರ್ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಈ ಮೂವರೊಂದಿಗೆ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಮಹಮದ್ ಅಶ್ವಕ್ ಶೇಖ್ (26) ಎಂಬಾತನಿಗೂ ಕೂಡ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಉಳಿದಂತೆ ಇಬ್ಬರು ಬಾಲಾಪರಾಧಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧದ ವಿಚಾರಣೆಯನ್ನು ಪ್ರತ್ಯೇಕವಾಗಿ ಬಾಲಾಪರಾಧ ನ್ಯಾಯಾಲಯದಲ್ಲಿ ನಡೆಸಲಾಗುತ್ತಿದೆ.
ಕಳೆದ ಆಗಸ್ಟ್ 23ರಂದು ಮುಂಬೈನ ಶಕ್ತಿಮಿಲ್ಸ್ಗೆ ಸುದ್ದಿಗಾಗಿ ತೆರಳಿದ್ದ ಪತ್ರಿಕಾ ಛಾಯಾಗ್ರಾಹಕಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಪ್ರಕರಣ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆಯೇ ಇದೇ ಸ್ಥಳದಲ್ಲಿ ಇದೇ ದುಷ್ಕರ್ಮಿಗಳಿಂದ ಅತ್ಯಾಚಾರಕ್ಕೊಳಗಾಗಿದ್ದ ಟೆಲಿಫೋನ್ ಆಪರೇಟರ್ ಧೈರ್ಯ ಮಾಡಿ ವಿಷಯವನ್ನು ಬಹಿರಂಗಗೊಳಿಸಿದ್ದರು. ಪತ್ರಿಕಾ ಛಾಯಾಗ್ರಾಹಕಿಯ ಮೇಲೆ ಅತ್ಯಾಚಾರ ನಡೆಯುವುದಕ್ಕೂ ಮುನ್ನವೇ ಅಂದರೇ 2013ರ ಜುಲೈ 21ರಂದು ಒಂಟಿಯಾಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಟೆಲಿಫೋನ್ ಆಪರೇಟರ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು.
ಪ್ರಕರಣ ಸಂಬಂಧ ಎಲ್ಲ 7 ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಸಂಚು, ಕೊಲೆ ಬೆದರಿಕೆ, ಹಲ್ಲೆ ಮತ್ತು ಸಾಕ್ಷ್ಯ ನಾಶ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು. ದೂರು ದಾಖಲಾದ ಕೇವಲ 28 ದಿನಗಳಲ್ಲಿ 41 ಸಾಕ್ಷ್ಯಾಧಾರಗಳನ್ನು ಹೊಂದಿರುವ ಒಟ್ಟು 600 ಪುಟಗಳ ಆರೋಪ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣ ಕೂಡ ತ್ವರಿತಗತಿಯಲ್ಲಿ ಸಾಗಿ ಇಂದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ (ಜೀವನಪರ್ಯಂತ ಜೈಲು ವಾಸ) ವಿಧಿಸಲಾಗಿದೆ.