ಮೋದಿ, ಪವನ್ ಭೇಟಿ: ಚಿರು ಆಶ್ಚರ್ಯ
ಗೋದ್ರಾ ನರಮೇಧದ ಕುರಿತು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನು ಟೀಕಿಸಿದ ಚಿರಂಜೀವಿ
ವಿಶಾಖಪಟ್ಟಣ: ಶುಕ್ರವಾರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರ ಭೇಟಿ ಕುರಿತು ಕೇಂದ್ರ ಪ್ರವಾಸೋಧ್ಯಮ ಸಚಿವ ಚಿರಂಜೀವಿ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಿಶಾಖಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಚಿರಂಜೀವಿ ಅವರು ತಮ್ಮ ಸಹೋದರ ಪವನ್ ಕಲ್ಯಾಣ್ ಮತ್ತು ನರೇಂದ್ರ ಮೋದಿ ಭೇಟಿ ಕುರಿತು ಪರೋಕ್ಷವಾಗಿ ಟೀಕಿಸಿದ್ದಾರೆ. ಮೋದಿ ಮತ್ತು ಪವನ್ ಭೇಟಿ ಕುರಿತು ಮಾತನಾಡಿದ ಚಿರಂಜೀವಿ ಅವರು, 'ನನ್ನ ತಮ್ಮ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ಕುರಿತು ನನಗೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ನನ್ನ ತಮ್ಮ ಜಾತ್ಯಾತೀತ ವ್ಯಕ್ತಿ ಅದರಲ್ಲಿ ಎರಡು ಮಾತಿಲ್ಲ. ಆದರೆ ನಿನ್ನೆ ಆತ ಗೋದ್ರಾ ನರಮೇಧದಂತಹ ಗಂಭೀರ ಆರೋಪವಿರುವ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವುದು ನನಗೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ' ಎಂದು ಹೇಳಿದರು.
'ಗೋದ್ರಾ ನರಮೇಧದಲ್ಲಿ ಮೋಧಿ ಅವರ ಪಾತ್ರದ ಕುರಿತು ಪವನ್ ಕಲ್ಯಾಣ್‌ಗೆ ಕಿಂಚಿತ್ತು ಜ್ಞಾನವಿದ್ದರೂ ಆತ ಅವರನ್ನು ಭೇಟಿಯಾಗುತ್ತಿರಲಿಲ್ಲ. ನರೇಂದ್ರ ಮೋದಿ ಅವರಾಗಲಿ ಅಥವಾ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಯಾವೊಬ್ಬ ನಾಯಕರಾಗಲಿ ಗೋದ್ರಾ ನರಮೇಧದ ಕುರಿತು ದೇಶದ ಜನತೆಯ ಬಳಿ ಕ್ಷಮೆ ಕೇಳಿಲ್ಲ. ಕನಿಷ್ಟ ಆ ಬಗ್ಗೆ ವಿವರ ನೀಡುವ ಸೌಜನ್ಯ ಕೂಡ ಬಿಜೆಪಿ ತೋರಲಿಲ್ಲ. ಬಿಜೆಪಿಯಾಗಲಿ ಅಥವಾ ಆ ಪಕ್ಷದ ನಾಯಕರಾಗಲಿ ಈ ಬಗ್ಗೆ ವಿವರ ನೀಡಿದ ನಂತರ ಪವನ್ ಅವರನ್ನು ಭೇಟಿ ಮಾಡಿದ್ದರೆ ನಾನು ಪವನ್ ನಿರ್ಧಾರ ಸರಿ ಎಂದು ಒಪ್ಪಿಕೊಳ್ಳುತ್ತಿದ್ದೆ' ಎಂದು ಚಿರಂಜೀವಿ ಹೇಳಿದರು.
ಪ್ರಜಾರಾಜ್ಯಂ ಪಕ್ಷದ ಸಂಸ್ಥಾಪಕ ಮತ್ತು ಕೇಂದ್ರ ಪ್ರವಾಸೋಧ್ಯಮ ಸಚಿವ ಚಿರಂಜೀವಿ ಅವರ ಕಿರಿಯ ಸಹೋದರ ಕೂಡ ಆಗಿರುವ ಪವನ್ ಕಲ್ಯಾಣ್ ಅವರು ಇದೇ ಮಾರ್ಚ್ 14ರಂದು ಹೈದರಾಬಾದ್‌ನಲ್ಲಿ ನೂತನ ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದರು. ಪಕ್ಷ ಸ್ಥಾಪನೆಯ ಸಂದರ್ಭದಲ್ಲಿಯೇ ತಾವು ಕಾಂಗ್ರೆಸ್ ವಿರೋಧಿ ಎಂದು ಹೇಳಿದ್ದ ಪವನ್, ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಬೇರಾವುದೇ ಪಕ್ಷದೊಂದಿಗೆ ಕೈಜೋಡಿಸಲು ಸಿದ್ಧ ಎಂದು ಘೋಷಣೆ ಮಾಡಿದ್ದರು.