ಶೇ.25ರಷ್ಚು ತೂಕ ಕಳೆದು ಕೊಂಡ 'ಶೂಮಾಕರ್'!
ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವ ಫಾರ್ಮುಲಾ 1ಖ್ಯಾತಿಯ ಮೈಕೆಲ್ ಶೂಮಾಕರ್ ಅವರು ತಮ್ಮ ದೇಹದ ಶೇ.25 ರಷ್ಟು ತೂಕವನ್ನು ಕಳೆದುಕೊಂಡಿದ್ದಾರೆ.
ನವದೆಹಲಿ: ಸ್ಕೀಯಿಂಗ್ ವೇಳೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವ ಫಾರ್ಮುಲಾ 1ಖ್ಯಾತಿಯ ಮೈಕೆಲ್ ಶೂಮಾಕರ್ ಅವರು ತಮ್ಮ ದೇಹದ ಶೇ.25 ರಷ್ಟು ತೂಕವನ್ನು ಕಳೆದುಕೊಂಡಿದ್ದಾರೆ.
ಶೂಮಾಕರ್ ಕೋಮಾ ಸ್ಥಿತಿಯಲ್ಲಿರುವುದರಿಂದ ಅವರ ದೇಹ ಸಂಪೂರ್ಣ ನಿಶ್ಚಲವಾಗಿದ್ದು, ಹೀಗಾಗಿ ದೇಹದಲ್ಲಿ ಶೇ.25 ರಷ್ಟು ತೂಕ ನಷ್ಟವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಪ್ರಸ್ತುತ ಶೂಮಾಕರ್ ಅವರ ತೂಕ 55 ಕೆ.ಜಿ ಎಂದು ತಿಳಿದುಬಂದಿದೆ. ಅವರನ್ನು ಕೋಮಾದಿಂದ ಹೊರತರುವುದಕ್ಕಾಗಿ ವೈದ್ಯರು ಸಕಲ ಪ್ರಯತ್ನಗಳನ್ನು ಮುಂದುವರೆಸಿದ್ದು, ಈ ನಡುವೆ 'ಸ್ನಾಯು ಕ್ಷೀಣತೆ' (ದೇಹದ ನಿಶ್ಚಲತೆಯಿಂದಾಗಿ ಸ್ನಾಯುಗಳು ಬಲಹೀನವಾಗುವುದು) ಸಮಸ್ಯೆ ಕೂಡ ಆರಂಭವಾಗಿದೆ ಎನ್ನಲಾಗುತ್ತಿದೆ.
ಆದರೆ ಈ ಬಗ್ಗೆ ವೈದ್ಯರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಕಳೆದ ಡಿಸೆಂಬರ್ 29ರಂದು ಸ್ಕೀಯಿಂಗ್‌ಗೆ ಮಾಡುತ್ತಿದ್ದ ಮೈಕೆಲ್ ಶೂಮಾಕರ್ ಅವರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾದರು. ಕೂಡಲೇ ಅವರನ್ನು ಏರ್ ಆಂಬುಲೆನ್ಸ್ ಮೂಲಕವಾಗಿ ಆಸ್ಪತ್ರೆಗೆ ರವಾನಿಸಲಾಯಿತಾದರೂ, ತಲೆಗೆ ಬಿದ್ದ ತೀವ್ರವಾದ ಪೆಟ್ಟಿನಿಂದಾಗಿ ಶೂಮಾಕರ್ ಅವರು ಅದಾಗಲೇ ಕೋಮಾ ಸ್ಥಿತಿ ತಲುಪಿದ್ದರು. ಪ್ರಸ್ತುತ ಮೈಕೆಲ್ ಶೂಮಾಕರ್ ಅವರಿಗೆ ಗ್ರೆನೋಬಲ್‌ನ ಫ್ರೆಂಚ್ ಆಲ್ಪೈನ್ ಸಿಟಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.