ಇಂಡಿಯನ್ ಮುಜಾಹಿದ್ದೀನ್ ನ ನಾಲ್ವರು ಉಗ್ರರ ಬಂಧನ
ಎಟಿಎಸ್ ಮತ್ತು ದೆಹಲಿ ವಿಶೇಷ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಲ್ಕು ಪ್ರಮುಖ ಉಗ್ರರನ್ನು ಬಂಧಿಸಲಾಗಿದೆ.
ನವದೆಹಲಿ: ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ದೆಹಲಿ ವಿಶೇಷ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ನಾಲ್ಕು ಪ್ರಮುಖ ಉಗ್ರರನ್ನು ಬಂಧಿಸಲಾಗಿದೆ.
ರಾಜಸ್ತಾನದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಉಗ್ರ ಯಾಸಿನ್ ಭಟ್ಕಳ್ನ ಸಹಚರ ಸೇರಿದಂತೆ ನಾಲ್ಕು ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಉಗ್ರ ಸಂಘಟನೆಯಲ್ಲಿ ಬಾಂಬ್ ತಯಾರಿಕೆಯ ನೇತೃತ್ವ ವಹಿಸಿದ್ದ ವಖಾಸ್ ಎಂಬ ಉಗ್ರನನ್ನೂ ಕೂಡ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಉಗ್ರ ವಖಾಸ್ನನ್ನು ಜೋಧ್ ಪುರದಲ್ಲಿ ಬಂಧಿಸಲಾಗಿದ್ದು, ಉಳಿದ ಮೂವರು ಉಗ್ರರನ್ನು ಜೈಪುರದಲ್ಲಿ ಬಂಧಿಸಲಾಗಿದೆ. ಪಾಕಿಸ್ತಾನ ಮೂಲದ ವಖಾಸ್ ದೇಶದಲ್ಲಿ ನಡೆದ ವಿವಿಧ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದನು ಎಂದು ತಿಳಿದು ಬಂದಿದೆ.
ಜವೇರಿ ಬಜಾರ್ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ವಖಾಸ್ ನ ನೇರ ಕೈವಾಡವಿರುವುದು ಸ್ಪಷ್ಟವಾಗಿದೆ. ಅಲ್ಲದೆ ಸ್ವತಃ ಐಎಂನ ಮುಖ್ಯಸ್ಥ ಮತ್ತು ಬಂಧಿತ ಉಗ್ರ ಯಾಸಿನ್ ಭಟ್ಕಳ್ ಸಿಸಿಟಿವಿ ದೃಶ್ಯಾವಳಿಗಳ ಮೂಲಕವಾಗಿ ವಖಾಸ್ ನನ್ನು ಗುರುತಿಸಿದ್ದಾನೆ. ಬಂಧಿತ ವಖಾಸ್ ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದನ್ನು ಕೂಡ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಲ್ಲದೆ ಹೈದರಾಬಾದ್ ಅವಳಿ ಸ್ಪೋಟ ಮತ್ತು 2012ರ ಪುಣೆಯಲ್ಲಿ ನಡೆದ ಬಾಂಬ್ ಸ್ಪೋಟಗಳಲ್ಲಿಯೂ ವಖಾಸ್ ಭಾಗಿಯಾಗಿದ್ದನು ಎಂದು ತಿಳಿದುಬಂದಿದೆ.
ಉಗ್ರ ವಖಾಸ್, ಎಟಿಎಸ್ ಮತ್ತು ರಾಷ್ಟ್ರೀಯ ತನಿಖಾ ದಳಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ಈತನ ಕುರಿತು ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ 10 ಲಕ್ಷ ರುಪಾಯಿ ಬಹುಮಾನವನ್ನು ಕೂಡ ಘೋಷಿಸಿತ್ತು.