ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಕೆ: ಜಸ್ವಂತ್ ಸಿಂಗ್
ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರು ತಮ್ಮದೇ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ತಮ್ಮ ಬಾರ್ಮರ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ..
ಜೋಧ್ ಪುರ: ಬಾರ್ಮರ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರು ನಾಳೆ ನಾಮಪತ್ರ ಸಲ್ಲಿಸಲ್ಲಿದ್ದಾರೆ.
ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರು ತಮ್ಮದೇ ಪಕ್ಷದ ವಿರುದ್ಧ ಇಂದು ತೀವ್ರ ವಾಗ್ದಾಳಿ ನಡೆಸಿದ್ದು, ತಮ್ಮ ಬಾರ್ಮರ್ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು.
ರಾಜಸ್ತಾನದ ತಮ್ಮ ನಿವಾಸದಲ್ಲಿ ಮಾತನಾಡಿದ ಜಸ್ವಂತ್ ಸಿಂಗ್ ಅವರು, 'ಮನವಿಯ ನಡುವೆಯೂ ನನನ್ನು ಹೊರತುಪಡಿಸಿ ಬೇರೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಬಗ್ಗೆ ವಿಚಾರಿಸಿದರೆ ನನ್ನನ್ನೇ ಅಡ್ಜಸ್ಟ್ ಮಾಡಿಕೊಳ್ಳುವಂತೆ ಹೇಳಿತ್ತಾರೆ. ಬೇಕಾದಂತೆ ಅಡ್ಜಸ್ಟ್ ಮಾಡಿಕೊಳ್ಳಲು ನಾನೇನು ಕುರ್ಚಿ ಅಥವಾ ಟೇಬಲ್ ಅಲ್ಲ. ಇದು ಅವರ ಸೊಕ್ಕನ್ನು ತೋರಿಸುತ್ತದೆ. ಪಕ್ಷದ ಹಿರಿಯ ಮುಖಂಡನಾದ ನನ್ನನ್ನು ಅವಮಾನಕಾರಿಯಾಗಿ ನಡೆಸಿಕೊಂಡಿದ್ದಾರೆ. ಹೀಗಾಗಿಯೇ ನಾನು ನಾಳೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ' ಎಂದು ಅವರು ಹೇಳಿದರು.
ಈ ಹಿಂದೆ ತಮ್ಮ ಸ್ವಕ್ಷೇತ್ರವಾಗಿರುವ ಬಾರ್ಮರ್ ಕ್ಷೇತ್ರದಿಂದಲೇ ತಾವು ಸ್ಪರ್ಧಿಸುವುದಾಗಿ ಜಸ್ವಂತ್ ಸಿಂಗ್ ಅವರು ಬಿಜೆಪಿ ಹೈಕಮಾಂಡ್ಗೆ ಸ್ಪಷ್ಟಪಡಿಸಿದ್ದರು. ಅವರ ನಿರ್ಧಾರದ ನಡುವೆಯೂ ಬಾರ್ಮರ್ ಕ್ಷೇತ್ರದಿಂದ ಬಿಜೆಪಿ ಪರವಾಗಿ ನಿವೃತ್ತ ಕರ್ನಲ್ ಸೋನಾ ರಾಮ್ ಚೌದರಿ ಅವರಿಗೆ ಟಿಕೆಟ್ ನೀಡಿದ್ದು, ಜಸ್ವಂತ್ ಸಿಂಗ್ ಅವರ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಪಕ್ಷದ ನಿರ್ಧಾರದ ವಿರುದ್ಧ ಬಹಿರಂಗವಾಗಿಯೇ ಬಂಡಾಯವೆದ್ದಿರುವ ಜಸ್ವಂತ್ ಸಿಂಗ್ ಅವರು, ಪಕ್ಷೇತರ ಅಭ್ಯರ್ಥಿಯಾಗಿ ನಾಳೆ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.
ಪಕ್ಷ ಬಿಡುವ ಚಿಂತನೆಯಲಿಲ್ಲ: ಜಸ್ವಂತ್ ಸಿಂಗ್
ಬಾರ್ಮರ್ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿರುವ ಕುರಿತು ಬಿಜೆಪಿ ವಿರುದ್ಧವಾಗಿ ಬಂಡಾಯವೆದ್ದಿರುವ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರು, ಪಕ್ಷ ಬಿಡುವ ಕುರಿತು ಚಿಂತನೆ ನಡೆಸಿಲ್ಲ ಎಂದು ಹೇಳಿದ್ದಾರೆ. ಪ್ರಸ್ತುತ ತಾವು ತಮ್ಮ ಜೀವನದ ಕೊನೆಯ ಚುನಾವಣೆಯನ್ನು ಕೇಂದ್ರೀಕರಿಸಿಕೊಂಡಿದ್ದು, ಬೇರೆ ವಿಚಾರಗಳ ಕುರಿತು ಚಿಂತಿಸಿಲ್ಲ ಎಂದು ಹೇಳಿದ್ದಾರೆ.
ಜಸ್ವಂತ್ ಸಿಂಗ್ ಗೆ ಟಿಕೆಟ್ ಕೈ ತಪ್ಪಲು ವಸುಂಧರಾ ರಾಜೇ ಕಾರಣ..?
ಬಿಜೆಪಿ ಪಕ್ಷದ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರಿಗೆ ಟಿಕೆಟ್ ಕೈತಪ್ಪಲು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರೇ ಕಾರಣ ಎನ್ನಲಾಗುತ್ತಿದೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜಸ್ತಾನದ ಮೇಲುಸ್ತುವಾರಿಯನ್ನು ಬಿಜೆಪಿ ಹೈಕಮಾಂಡ್ ವಸುಂಧರಾ ರಾಜೇ ಅವರಿಗೆ ನೀಡಿದ್ದು, ಅವರ ಶಿಫಾರಸ್ಸಿನ ಮೇರೆಗೆ ಜಸ್ವಂತ್ ಸಿಂಗ್ ಅವರ ಬಾರ್ಮರ್ ಕ್ಷೇತ್ರದಿಂದ ನಿವೃತ್ತ ಕರ್ನಲ್ ಸೋನಾ ರಾಮ್ ಚೌದರಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಇದೇ ತಮ್ಮ ಕೊನೆಯ ಚುನಾವಣೆ ಎಂದು ಹೇಳಿದ್ದ ಜಸ್ವಂತ್ ಸಿಂಗ್ ಅವರು, ತಮ್ಮ ಜನ್ಮಸ್ಥಳವಾದ ಬಾರ್ಮರ್ ಕ್ಷೇತ್ರದಿಂದಲೇ ತಾವು ತಮ್ಮ ಕೊನೆಯ ಚುನಾವಣೆಯನ್ನು ಎದುರಿಸುವುದಾಗಿ ಹೇಳಿದ್ದರು. ಆದರೆ ತಮಗೆ ಟಿಕೆಟ್ ಕೈ ತಪ್ಪುವ ಕುರಿತು ಈ ಹಿಂದೆಯೇ ಮಾಹಿತಿ ನೀಡಿದ್ದ ಜಸ್ವಂತ್ ಸಿಂಗ್ ಅವರು, ಈ ಕುರಿತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ವಿರುದ್ಧ ಕಿಡಿಕಾರಿದ್ದರು. 'ಬಿಜೆಪಿಯಲ್ಲಿ ಹಿಂದಿನಂತೆ ಇಲ್ಲ. ಕೆಲ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ' ಎಂದು ಜಸ್ವಂತ್ ಸಿಂಗ್ ಅವರು ಪರೋಕ್ಷವಾಗಿ ವಸುಂಧರಾ ರಾಜೇ ಅವರ ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಇದೇ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ವಿರುದ್ಧವಾಗಿಯೂ ಅವರು ಗುಡುಗಿದ್ದರು.