ವಿಮಾನ ಹೋಲುವ ವಸ್ತು ಪತ್ತೆ
ನಿಗೂಢವಾಗಿ ನಾಪತ್ತೆಯಾದ ಮಲೇಷ್ಯಾ ವಿಮಾನ ಹೋಲುವ ಅನುಮಾನಾಸ್ಪದ ಬಿಳಿ..
ಬೀಜಿಂಗ್: ನಿಗೂಢವಾಗಿ ನಾಪತ್ತೆಯಾದ ಮಲೇಷ್ಯಾ ವಿಮಾನ ಹೋಲುವ ಅನುಮಾನಾಸ್ಪದ ಬಿಳಿ ವಸ್ತು ದಕ್ಷಿಣ ಹಿಂದೂ ಮಹಸಾಗರದಲ್ಲಿ ಪತ್ತೆಯಾಗಿದ್ದು, ಇದು ನಾಪತ್ತೆಯಾದ ವಿಮಾನದ ತುಣುಕಾಗಿರಬಹುದು ಎಂದು ಶಂಕಿಸಲಾಗುತ್ತಿದೆ.
ಚೀನಾದ ನೌಕಾಪಡೆಯಿಂದ ವಿಮಾನ ನಾಪತ್ತೆ ಕಾರ್ಯಾಚರಣೆಗೆ ನಿಯೋಜನೆಯಾಗಿದ್ದ 'ಇಲ್ಯುಷಿನ್-76' ವಿಮಾನವು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಬಿಳಿ ಬಣ್ಣದ ಚೌಕಾಕಾರದ ಬೃಹತ್ ವಸ್ತುವನ್ನು ಪತ್ತೆ ಮಾಡಿದೆ. ಈ ವಸ್ತುವು ಕಳೆದ ಮಾರ್ಚ್ 8ರಂದು ನಾಪತ್ತೆಯಾಗಿದ್ದ ಮಲೇಷ್ಯನ್ ಏರ್ಲೈನ್ಸ್ಗೆ ಸೇರಿದ ಎಂ.ಹೆಚ್.370 ಬೋಯಿಂಗ್ ವಿಮಾನದ ತುಂಡಾಗಿರಬಹುದು ಎಂದು ಶಂಕಿಸಲಾಗುತ್ತಿದೆ. ಹೀಗಾಗಿಯೇ ಬಿಳಿ ವಸ್ತು ಪತ್ತೆಯಾಗಿರುವ ಸ್ಥಳಕ್ಕೆ ಚೀನಾದ ವಿಮಾನ ಪತ್ತೆ ಕಾರ್ಯಾಚರಣೆಯ ತಂಡ ದೌಡಾಯಿಸಿದೆ.
ದಕ್ಷಿಣ ಏಷ್ಯಾದಿಂದ ಆಸ್ಟ್ರೇಲಿಯಾ ಮಾರ್ಗದಲ್ಲಿ ಈ ಬಿಳಿ ಬಣ್ಣದ ವಸ್ತು ಪತ್ತೆಯಾಗಿದ್ದು, ಇದೇ ಮಾರ್ಗವಾಗಿಯೇ ಎಂ.ಹೆಚ್.370 ವಿಮಾನ ಕೂಡ ಸಂಚರಿಸಿರಬಹುದು ಎಂದು ಈ ಹಿಂದೆ ತಜ್ಞರು ಅಭಿಪ್ರಾಯಪಟ್ಟಿದ್ದರು. ಹೀಗಾಗಿಯೇ ಪ್ರಸ್ತುತ ಲಭಿಸಿರುವ ಬಿಳಿ ಬಣ್ಣದ ವಸ್ತುವಿನ ಕುರಿತು ಕುತೂಹಲ ಇಮ್ಮಡಿಯಾಗಿದೆ.
ನಿನ್ನೆ ಇದೇ ಮಾರ್ಗದಲ್ಲಿ ಆಸ್ಟ್ರೇಲಿಯಾ ಬಳಿ ಮರದ ಸಾಮಗ್ರಿ ಮತ್ತು ಬೆಲ್ಟ್ ಪತ್ತೆಯಾಗಿತ್ತು. ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಆಸ್ಟ್ರೇಲಿಯಾ ತಂಡಕ್ಕೆ ದೊರೆತ ಉಪಗ್ರಹ ಆಧಾರಿತ ಚಿತ್ರದಲ್ಲಿ ಸಮುದ್ರದಲ್ಲಿ ಈ ವಸ್ತುಗಳು ಇರುವುದು ಪತ್ತೆಯಾಗಿತ್ತು. ಪ್ರಸ್ತುತ ಈ ವಸ್ತುಗಳು ನಾಪತ್ತೆಯಾದ ವಿಮಾನಕ್ಕೆ ಸಂಬಂಧಿಸಿದವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪತ್ತೆ ಕಾರ್ಯಾಚರಣೆಯ ವ್ಯಾಪ್ತಿ ವಿಸ್ತರಿಸಿದ್ದ ಚೀನಾ
ನಿನ್ನೆ ಆಸ್ಟ್ರೇಲಿಯಾ ಬಳಿ ಮರದ ಸಾಮಗ್ರಿ ಮತ್ತು ಬೆಲ್ಟ್ಗಳ ಪತ್ತೆಯಾಗುತ್ತಿದ್ದಂತೆಯೇ ಮಂಕಾಗಿದ್ದ ಶೋಧ ಕಾರ್ಯಾಚರಣೆಗೆ ಉತ್ತೇಜನ ದೊರೆತಿತ್ತು. ಅಲ್ಲದೆ ಇತ್ತೀಚೆಗೆ ಉಪಗ್ರಹಗಳು ರವಾನಿಸಿದ್ದ ಕೆಲ ಚಿತ್ರಗಳಲ್ಲಿ ಅನುಮಾನಾಸ್ಪದ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ತನ್ನ ಕಾರ್ಯಾಚರಣೆಯ ವ್ಯಾಪ್ತಿಯನ್ನು 59 ಸಾವಿರ ಚದರ ಕಿ.ಮೀ.ಗೆ ವಿಸ್ತರಿಸಿಕೊಂಡಿತ್ತು. ಇದೀಗ ಇದೇ ವ್ಯಾಪ್ತಿಯಲ್ಲಿ ಬಿಳಿ ಬಣ್ಣದ ಚೌಕಾಕಾರದ ವಸ್ತು ಪತ್ತೆಯಾಗಿದೆ. ಆದರೆ ಈಗ ಪತ್ತೆಯಾಗಿರುವ ವಸ್ತು ವಿಮಾನದ್ದೇ ಎಂಬುದಕ್ಕೆ ಯಾವುದೇ ಖಚಿತ ಪುರಾವೆಗಳಿಲ್ಲ.