ಅಧ್ಯಕ್ಷ ಸ್ಥಾನ ತ್ಯಜಿಸಿ: ಶ್ರೀನಿವಾಸನ್ಗೆ ಸುಪ್ರೀಂ ತಾಕೀತು
ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ತಮ್ಮ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿ ನ್ಯಾಯಸಮ್ಮತ ತನಿಖೆಗೆ ಅವಕಾಶ ಮಾಡಿಕೊಡ ಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ತಮ್ಮ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿ ನ್ಯಾಯಸಮ್ಮತ ತನಿಖೆಗೆ ಅವಕಾಶ ಮಾಡಿಕೊಡ ಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಕೆ.ಪಟ್ನಾಯಕ್ ಅವರು, ನ್ಯಾಯಸಮ್ಮತ ವಿಚಾರಣೆ ನಡೆಸಲು ಶ್ರೀನಿವಾಸನ್ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸಿದ ನ್ಯಾ.ಮುಕುಲ್ ಮುದ್ಗಲ್ ವರದಿಯನ್ನು ಆಧರಿಸಿ ನ್ಯಾಎ.ಕೆ.ಪಟ್ನಾಯಕ್ ಅವರು ಇಂತಹ ಅಭಿಪ್ರಾಯಕ್ಕೆ ಬಂದಿದ್ದಾರೆ. ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 27ಕ್ಕೆ ಮುಂದೂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ದ ಹಲವು ಆರೋಪಗಳು ಕೇಳಿಬರುತ್ತಿದ್ದರೂ ಅಧ್ಯಕ್ಷ ಗಾದಿಯಿಂದ ಕೆಳಗಿಳಿಯಲು ಒಪ್ಪದ ಶ್ರೀನಿವಾಸನ್ ಅವರು, ತಮ್ಮ ಸ್ಥಾನವನ್ನು ಗಟ್ಟಿಗಳಿಸಿಕೊಳ್ಳಲು ಪ್ರಯತ್ನಿಸಿದ್ದರು. ಅಲ್ಲದೆ ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿಯೂ ಕೂಡ ಶ್ರೀನಿವಾಸನ್ ತಮ್ಮ ಪ್ರಭಾವ ಬೀರುವ ಮೂಲಕ ತಮ್ಮ ಬೆಂಬಲಿತ ಸದಸ್ಯರೇ ಐಸಿಸಿ ಆಡಳಿತ ಮಂಡಳಿಯಲ್ಲಿ ಹೆಚ್ಚಿನ ಸ್ಥಾನಗಳಿಸಿಕೊಳ್ಳುವಂತೆ ನೋಡಿಕೊಂಡಿದ್ದರು.
ಐಪಿಎಲ್ನಲ್ಲಿ ಶ್ರೀನಿವಾಸನ್ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸೇರಿದಂತೆ ಹಲವು ಆರೋಪಗಳು ಕೇಳಿಬರುತ್ತಿದ್ದು, ಈ ಪೈಕಿ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ತಮ್ಮ ಆಳಿಯ ಗುರುನಾಥನ್ ಮೇಯಪ್ಪನ್ ಅವರಿಗೆ ಪರೋಕ್ಷ ಬೆಂಬಲ ನೀಡಿದ ಆರೋಪ ಕೂಡ ಶ್ರೀನಿವಾಸನ್ ಮೇಲಿದೆ. ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀನಿವಾಸನ್ ಅವರ ಹಸ್ತಕ್ಷೇಪದ ಕುರಿತು ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಶಿಯೇಷನ್ ಅಧ್ಯಕ್ಷರು ಆರೋಪ ಹೊರಿಸಿದ್ದರು.
ಅಂತೆಯೇ 2004ರ ಐಪಿಎಲ್ ಪಂದ್ಯಾವಳಿಯಲ್ಲಿನ ಪಂದ್ಯಗಳ ಸಂಖ್ಯೆಯನ್ನು ಜಾಹಿರಾತುದಾರರಿಗೆ ಮತ್ತು ಖಾಸಗಿ ಚಾನಲ್ಗೆ ಅನುಕೂಲವಾಗುವಂತೆ ಮಾಡಿಕೊಡಲು 94 ಪಂದ್ಯಗಳಿದ್ದ ಸರಣಿಯನ್ನು 74 ಪಂದ್ಯಗಳಿಗೆ ಕಡಿತಗೊಳಿಸಿದ್ದರು. ಆ ಮೂಲಕ ಶ್ರೀನಿವಾಸನ್ ಅವರು ಬರೊಬ್ಬರಿ 2882 ಕೋಟಿ ರು. ಅವ್ಯವಹಾರದಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೂಡ ಇದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸನ್ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿತ್ತು.
ಈ ಹಿಂದೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ರಚಿಸಿದ್ದ ಸಮಿತಿಯು ತನಿಖೆ ನಡೆಸಿ ಆರೋಪ ಪಟ್ಟಿಯಲ್ಲಿ ಶ್ರೀನಿವಾಸನ್ ಅವರ ಹೆಸರನ್ನು ದಾಖಲಿಸಿತ್ತು. ಅಲ್ಲದೆ ಹಗರಣದ ಕುರಿತು ನ್ಯಾಯಸಮ್ಮತ ತನಿಖೆ ನಡೆಯಬೇಕೆಂದರೆ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್ ಕೆಳಗಿಳಿಯಬೇಕು ಎಂದು ಶಿಫಾರಸ್ಸು ಮಾಡಿತ್ತು. ಇದೀಗ ಸುಪ್ರೀಂ ಕೋರ್ಟ್ ಸೂಚನೆಯಿಂದಾಗಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅಡಕತ್ತರಿಯಲ್ಲಿ ಸಿಲುಕಿದ್ದಾರೆ. ಅಲ್ಲದೆ ಅನಿವಾರ್ಯವಾಗಿ ತಮ್ಮ ಅಧ್ಯಕ್ಷಗಾದಿಯನ್ನು ತ್ಯಜಿಸಲೇಬೇಕಾದ ತುರ್ತುಸ್ಥಿತಿ ನಿರ್ಮಾಣವಾಗಿದೆ.