ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ: ಅಳಗಿರಿ
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಡಿಎಂಕೆ ಪಕ್ಷದ ಉಚ್ಛಾಟಿತ ಮುಖಂಡ ಎಂ.ಕೆ.ಅಳಗಿರಿ ಹೇಳಿದ್ದಾರೆ.
ಚೆನ್ನೈ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ ಎಂದು ಡಿಎಂಕೆ ಪಕ್ಷದ ಉಚ್ಛಾಟಿತ ಮುಖಂಡ ಎಂ.ಕೆ.ಅಳಗಿರಿ ಹೇಳಿದ್ದಾರೆ.
ಚೆನ್ನೈನಲ್ಲಿ ಮಾತನಾಡಿದ ಅಳಗಿರಿ, ಡಿಎಂಕೆ ಪಕ್ಷ ನನ್ನದಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಪಕ್ಷದಿಂದ ನನ್ನನ್ನು ಹೊರ ಹಾಕಿದ ಮಾತ್ರಕ್ಕೆ ಪಕ್ಷದಿಂದ ನಾನು ಶಾಶ್ವತವಾಗಿ ದೂರಾಗಿದ್ದೇನೆ ಎಂದು ಅರ್ಥವಲ್ಲ. ಡಿಎಂಕೆ ಪಕ್ಷವನ್ನು ಕಟ್ಟುವುದರಲ್ಲಿ ನನ್ನ ಶ್ರಮ ಕೂಡ ಅಡಗಿದೆ. ಆದರೆ ಪ್ರಸ್ತುತ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅಳಗಿರಿ ಹೇಳಿದರು.
ತಮ್ಮನ್ನು ಪಕ್ಷದಿಂದ ಹೊರಹಾಕುವ ಮೂಲಕ ಸ್ಟಾಲಿನ್ ಪಕ್ಷದ ಉತ್ತರಾಧಿಕಾರಿಯಾಗುವ ದಾರಿ ಸುಗಮವಾಗಲಿಲ್ಲವೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಳಗಿರಿ, ಡಿಎಂಕೆ ಪಕ್ಷದ ಉತ್ತರಾಧಿಕಾರಿಯಾಗಿ ಸ್ಟಾಲಿನ್ ಆಯ್ಕೆಯಾದರೂ, ಆಗದಿದ್ದರೂ ನನೇಗೇನು ಆಗಬೇಕಿಲ್ಲ. ನಾನು ಯಾವುದಕ್ಕೂ ಚಿಂತಿಸುವುದಿಲ್ಲ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆಗೆ ಸೋಲು ಕಟ್ಟಿಟ್ಟ ಬುತ್ತಿ
ಇದೇ ವೇಳೆ ಡಿಎಂಕೆ ಪಕ್ಷ ಚುನಾವಣೆಯಲ್ಲಿ ಹೀನಾಯವಾಗಿ ಸೋಲುತ್ತದೆ ಎಂದು ಅಳಗಿರಿ ಭವಿಷ್ಯ ನುಡಿದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಗಳಿಸಿದ ಅರ್ಧದಷ್ಟು ಸ್ಥಾನಗಳನ್ನು ಕೂಡ ಡಿಎಂಕೆ ಪಕ್ಷ ಈ ಬಾರಿ ಗಳಿಸುವುದಿಲ್ಲ. ಹೆಚ್ಚು ಎಂದರೆ 1 ರಿಂದ 2 ಸ್ಥಾನಗಳನ್ನಷ್ಟೇ ಗಳಿಸಬಹುದು ಎಂದು ಅಳಗಿರಿ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಆರೋಪದ ಮೇರೆಗೆ ಕಳೆದ ಜನವರಿಯಲ್ಲಿ ಅಮಾನತುಗೊಂಡಿದ್ದ ಅಳಗಿರಿ ಅವರನ್ನು ನಿನ್ನೆ ಡಿಎಂಕೆ ಮುಖ್ಯಸ್ಥರಾದ ಎಂ.ಕರುಣಾನಿಧಿ ಅವರು ಅಧಿಕೃತವಾಗಿ ಪಕ್ಷದಿಂದ ಉಚ್ಛಾಟಿಸಿದ್ದರು. ಅಲ್ಲದೆ ಡಿಎಂಕೆ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಿಂದಲೂ ಅಳಗಿರಿ ಮತ್ತು ಅವರ ಬೆಂಬಲಿಗರ ಹೆಸರುಗಳನ್ನು ಕೈ ಬಿಡಲಾಗಿತ್ತು. ಆದರೆ ಕರುಣಾನಿಧಿ ಅವರ ನಿರ್ಧಾರವನ್ನು ಅಳಗಿರಿ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯದಲ್ಲಿ ದೂರನ್ನು ಕೂಡ ದಾಖಲು ಮಾಡಲಾಗಿದೆ.