ಯಾವುದೇ ಸವಾಲಿಗೂ ಸಿದ್ಧ: ಸುನಿಲ್ ಗವಾಸ್ಕರ್
ಬಿಸಿಸಿಐನ ಅಧ್ಯಕ್ಷಕ್ಷಗಾದಿ ವಹಿಸಿಕೊಳ್ಳುವ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು, ತಾವು ಯಾವುದೇ ಸವಾಲು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.
ನವದೆಹಲಿ: ಬಿಸಿಸಿಐನ ಅಧ್ಯಕ್ಷಕ್ಷಗಾದಿ ವಹಿಸಿಕೊಳ್ಳುವ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು, ತಾವು ಯಾವುದೇ ಸವಾಲು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಮಾತನಾಡಿದ ಗವಾಸ್ಕರ್ ಅವರು, ಸುಪ್ರೀಂ ಕೋರ್ಟ್ ತನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಆಭಾರಿಯಾಗಿದ್ದೇನೆ. ಅಷ್ಟು ದೊಡ್ಡ ಜವಾಬ್ದಾರಿ ಹೊರಲು ನಾನು ಸಮರ್ಥನೇ ಎಂಬುದು ನನಗೆ ತಿಳಿದಿಲ್ಲ. ಆದರೆ ನನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎಂಬ ವಿಶ್ವಾಸ ನನ್ನಲ್ಲಿದೆ ಎಂದಿದ್ದಾರೆ.
ಓರ್ವ ಆರಂಭಿಕ ಆಟಗಾರನಾದವನಿಗೆ ಎಲ್ಲ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸಿಕೊಂಡು ಆಟವಾಡುವ ಸಾಮರ್ಥ್ಯವಿರಬೇಕು. ಅಂತಹ ಸಾಮರ್ಥ್ಯ ನನ್ನಲಿದೆ ಎಂದು ನಾನು ಭಾವಿಸಿದ್ದೇನೆ. ಒಂದು ವೇಳೆ ನ್ಯಾಯಾಲಯ ನನಗೆ ಆ ಜವಾಬ್ದಾರಿ ವಹಿಸಿದರೆ ಖಂಡಿತ ಸಂತೋಷವಾಗಿಯೇ ನಾನು ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂದು ಸುನಿಲ್ ಗವಾಸ್ಕರ್ ಹೇಳಿದರು.
ತಪ್ಪು ಸಾಬೀತಾಗುವವರೆಗೂ ಶ್ರೀನಿವಾಸನ್ ಅಪರಾಧಿಯಲ್ಲ
ಅಂತೆಯೇ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಕುರಿತು ಮಾತನಾಡಿರುವ ಸುನಿಲ್ ಗವಾಸ್ಕರ್ ಅವರು, ಯಾವುದೇ ಅಪರಾಧದಲ್ಲಿ ಆರೋಪಿಯ ತಪ್ಪು ಸಾಬೀತಾಗುವವರೆಗೂ ಆತ ಅಪರಾಧಿಯಲ್ಲ. ಇಲ್ಲಿಯೂ ಕೂಡ ಶ್ರೀನಿವಾಸನ್ ಅವರ ತಪ್ಪು ಸಾಬೀತಾಗುವವರೆಗೂ ಅವರು ನಿರಪರಾಧಿಯಾಗಿದ್ದು, ಪ್ರಕರಣದ ಕುರಿತು ಅಷ್ಟು ಸುಲಭವಾಗಿ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯಂತರ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, ಶ್ರೀನಿವಾಸನ್ ಅವರ ಬದಲಿಗೆ ಬಿಸಿಸಿಐನ ಹಂಗಾಮಿ ಅಧ್ಯಕ್ಷರಾಗಿ ಸುನಿಲ್ ಗವಾಸ್ಕರ್ ಅವರು ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಿತ್ತು. ಅಲ್ಲದೆ ಮುಂಬರುವ ಐಪಿಎಲ್ ಪಂದ್ಯಾವಳಿಗಳಿಂದ ಬೆಟ್ಟಿಂಗ್ ಆರೋಪ ಎದುರಿಸುತ್ತಿರುವ ತಂಡಗಳಾದ ರಾಜಸ್ತಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಹೊರಗಿಡಬೇಕು ಎಂದು ಆದೇಶಿಸಿತ್ತು. ಆಲ್ಲದೆ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯಿಂದ ಇಂಡಿಯಾ ಸಿಮೆಂಟ್ಸ್‌ನ ಸದಸ್ಯರನ್ನು ಹೋರಹಾಕಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.