ಸ್ಪಾಟ್ ಫಿಕ್ಸಿಂಗ್: ಐಪಿಎಲ್ 7 ರದ್ದು?
ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುಪ್ರೀಕೋರ್ಟ್ ಮಧ್ಯಂತರ ಆದೇಶದಿಂದಾಗಿ ಐಪಿಎಲ್ 7 ಸರಣಿಯೇ ರದ್ದಾಗುವ ಸಾಧ್ಯತೆ ಇದೆ.
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸುಪ್ರೀಕೋರ್ಟ್ ಮಧ್ಯಂತರ ಆದೇಶದಿಂದಾಗಿ ಐಪಿಎಲ್ 7 ಸರಣಿಯೇ ರದ್ದಾಗುವ ಸಾಧ್ಯತೆ ಇದೆ.
ಈಗಾಗಲೇ ಐಪಿಎಲ್ 7 ಸರಣಿಯ ವೇಳಾಪಟ್ಟಿ ಪ್ರಕಟವಾಗಿದ್ದು, ಇದೇ ಏಪ್ರಿಲ್ 16 ರಿಂದ ಐಪಿಎಲ್ ಪಂದ್ಯಾವಳಿ ಆರಂಭವಾಗ ಬೇಕಿತ್ತು. ಆದರೆ ಇದೀಗ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ವಿಚಾರಣೆ ನೆಡೆಸಿರುವ ಸುಪ್ರೀಂ ಕೋರ್ಟ್, ಆರೋಪ ಎದುರಿಸುತ್ತಿರುವ ಚೆನ್ನೈ ಮತ್ತು ರಾಜಸ್ತಾನ ರಾಯಲ್ಸ್ ತಂಡವನ್ನು ಟೂರ್ನಿಯಿಂದ ಹೊರಗಿಡುವಂತೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಐಪಿಎಲ್ ವೇಳಾಪಟ್ಟಿಯನ್ನು ಬದಲಾಯಿಸುವ ಅಥವಾ ಇಡೀ ಐಪಿಎಲ್ ಟೂರ್ನಿಯನ್ನೇ ರದ್ದು ಪಡಿಸುವ ಸಾಧ್ಯತೆ ಇದೆ.
ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಮತ್ತು ತಂಡದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಹಿಂದೆ ಪ್ರಕರಣದ ನ್ಯಾಯಸಮ್ಮತ ವಿಚಾರಣೆಗೆ ಶ್ರೀನಿವಾಸನ್ ಅವರು ತಮ್ಮ ಅಧ್ಯಕ್ಷ ಗಾದಿಯನ್ನು ತ್ಯಜಿಸಿ ಸಹಕರಿಸಬೇಕು ಎಂದು ಆದೇಶಿಸಿತ್ತು. ಅಲ್ಲದೆ ಐಪಿಎಲ್ ಆಡಳಿತ ಮಂಡಳಿಯಿಂದ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಪದಾಧಿಕಾರಿಗಳನ್ನು ದೂರವಿಡುವಂತೆ ಸೂಚಿಸಿತ್ತು.
ಸುಪ್ರೀಂಕೋರ್ಟ್ ನೀಡಿರುವ ನೂತನ ಆದೇಶದಿಂದಾಗಿ ಐಪಿಎಲ್ 7 ಸರಣಿಯ ಮೇಲೆ ಕಪ್ಪು ಛಾಯೆ ಆವರಿಸಿದೆ. ನಾಳೆ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತನ್ನ ಅಂತಿಮ ತೀರ್ಪು ನೀಡಲಿದ್ದು, ಐಪಿಎಲ್ 7ರ ಭವಿಷ್ಯ ನಾಳೆ ನಿರ್ಧಾರವಾಗಲಿದೆ.