ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೀನುಗಾರರ ಹತ್ಯೆ ವಿಚಾರಣೆಗೆ ತಡೆ

ಎನ್‌ಐಎ ವಿಚಾರಣೆಗೆ ಇಟಲಿ ತಕರಾರು, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Srinivasa Murthy VN
Updated On : 28 Mar 2014, 3:58 am

ನವದೆಹಲಿ: ಕೇರಳದಲ್ಲಿ ಭಾರತೀಯ ಮೀನುಗಾರರ ಹತ್ಯೆಗೈದ ಇಟಲಿ ನಾವಿಕರ ವಿರುದ್ಧದ ವಿಚಾರಣೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಾತ್ಕಾಲಿಕ ತಡೆ ನೀಡಿದೆ.

ಮೀನುಗಾರರ ಹತ್ಯೆ ಪ್ರಕರಣದ ವಿಚಾರಣೆ ನಡೆಸಲು ಎನ್‌ಐಎಗೆ ಯಾವುದೇ ಅಧಿಕಾರವಿಲ್ಲ ಎಂದು ವಾದಿಸಿರುವ ಇಟಲಿ ಸರ್ಕಾರ ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದೆ. ಈ ಹಿನ್ನಲೆಯಲ್ಲಿ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎನ್‌ಐಎ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಇಟಲಿ ಸರ್ಕಾರ ಸಲ್ಲಿಸಿರುವ ತಕರಾರಿಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಿಚಾರಣೆ ನಡೆಸುವ ಅಧಿಕಾರವಿಲ್ಲ ಎಂದು ವಾದಿಸಿರುವ ಇಟಲಿ ಸರ್ಕಾರ, ಈ ಕುರಿತು ನ್ಯಾಯಾಲಯದಲ್ಲಿ ತಕರಾರು ಅರ್ಜಿ ಸಲ್ಲಿಸಿದೆ. ಮೀನುಗಾರರ ಹತ್ಯೆ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕಿದ್ದು, ಪ್ರಕರಣವು ಪ್ರಸ್ತುತ ವಿಚಾರಣೆ ನಡೆಸುತ್ತಿರುವ ಎನ್‌ಐಎ ಸಂಸ್ಥೆಯ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಇಟಲಿ ಹೇಳಿದೆ.

ಇಟಲಿ ಸರ್ಕಾರದ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಕೋರ್ಟ್, ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿದೆ. ಈ ಹಿಂದೆ ಪ್ರಕರಣದ ಕುರಿತು ಇಟಲಿ ಸರ್ಕಾರಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದ ಭಾರತ ಸರ್ಕಾರ, ಘಟನೆ ನಡೆದಿರುವುದು ಅಂತಾರಾಷ್ಟ್ರೀಯ ಗಡಿಯಲ್ಲಿ ಅಲ್ಲ. ತನ್ನ ನೆಲದಲ್ಲೇ ಮೀನುಗಾರರ ಹತ್ಯೆ ನಡೆದಿದ್ದು, ವಿಚಾರಣೆಯನ್ನು ಭಾರತೀಯ ಕಾನೂನಿನ ಅಡಿಯಲ್ಲೇ ನಡೆಸುವುದಾಗಿ ಸ್ಪಷ್ಟಪಡಿಸಿತ್ತು.

2012ರ ಫೆಬ್ರವರಿ 15ರಂದು ಕೇರಳ ಕರಾವಳಿ ತೀರದಲ್ಲಿ ಮೀನುಗಾರರನ್ನು ಕಡಲ್ಗಳ್ಳರೆಂದು ಭಾವಿಸಿದ್ದ ಇಟಲಿ ನೌಕಾಪಡೆಯ ಇಬ್ಬರು ನಾವಿಕರು ಅವರತ್ತ ಗುಂಡು ಹಾರಿಸಿದ್ದರು. ಘಟನೆಯಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಚರ್ಚೆಗಳು ಪ್ರಸಾರವಾದವು. ಘಟನೆಯ ಗಂಭೀರತೆಯನ್ನು ಅರಿತ ಕೇಂದ್ರ ಸರ್ಕಾರ ಕೊನೆಗೆ ಫೆಬ್ರವರಿ 19ರಂದು ಇಬ್ಬರು ನಾವಿಕರನ್ನು ಬಂಧಿಸಿತ್ತು.

ಪ್ರಸ್ತುತ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದ್ದು, ಇದಕ್ಕೆ ಇಟಲಿ ಸರ್ಕಾರದ ತೀವ್ರ ವಿರೋಧವಿದೆ. ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ನಡೆಸಬೇಕು ಎಂದು ವಾದಿಸುತ್ತಿರುವ ಇಟಲಿ ಸರ್ಕಾರ, ಪದೇ ಪದೇ ವಿಚಾರಣೆಗೆ ತಡೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡುತ್ತಿದೆ. ಈ ಹಿಂದೆಯೂ ಕೂಡ ಪ್ರಕರಣದ ಕುರಿತು ತನಗೆ ಸಹಕರಿಸುವಂತೆ ಇಟಲಿ ಸರ್ಕಾರ ಅಂತಾರಾಷ್ಟ್ರೀಯ ಸಮುದಾಯದ ಮೊರೆ ಹೋಗಿತ್ತು. ಇಟಲಿ ಸರ್ಕಾರಕ್ಕೆ ಯೂರೋಪಿಯನ್ ಒಕ್ಕೂಟ ತನ್ನ ಬೆಂಬಲ ವ್ಯಕ್ತಪಡಿಸಿ, ಭಾರತ ಸರ್ಕಾರದೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement