ನನನ್ನು ಕಂಡರೆ ಕಾಂಗ್ರೆಸ್ಗೆ ಭಯ: ನರೇಂದ್ರ ಮೋದಿ
ಬಿಜಾಪುರ: ನನನ್ನು ಕಂಡರೆ ಕಾಂಗ್ರೆಸ್ ಪಕ್ಷಕ್ಕೆ ಭಯ ಆರಂಭವಾಗಿದ್ದು, ನಾನು ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದರ ಕುರಿತು ಕಾಂಗ್ರೆಸ್ ನಾಯಕರಿಗೆ ಈಗಾಗಲೇ ಚಿಂತೆ ಆರಂಭವಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬಿಜಾಪುರದಲ್ಲಿ ವಿಜಯ ಭಾರತ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಕಾಲ ಸನ್ನಿಹಿತವಾಗಿದೆ. ಇದರ ಅರಿವು ಕಾಂಗ್ರೆಸ್ ನಾಯಕರಿಗೂ ಕೂಡ ಇದ್ದು, ಅವರಿಗೆ ಈಗಾಗಲೇ ನನ್ನ ಬಗ್ಗೆ ಭಯ ಆರಂಭವಾಗಿದೆ. ಅವರಿಗೇಕೆ ನನ್ನ ಬಗ್ಗೆ ಇಷ್ಟೊಂದು ಭಯ. ಏಕೆಂದರೆ ನಾನು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇನೆ ಎಂದು ಅವರಿಗೆ ತಿಳಿದಿದೆ.
'ಹೀಗಾಗಿಯೇ ನನನ್ನ ಹಣಿಯಲು ಹಿಂಬಾಗಿಲ ರಾಜಕಾರಣ ಮಾಡುತ್ತಿದ್ದಾರೆ. ನನನ್ನು ತಡೆಯಲು ಕಾಂಗ್ರೆಸ್ ಪಕ್ಷ ಬೇರೆ ಪಕ್ಷಗಳನ್ನು ಒಗ್ಗೂಡಿಸುತ್ತಿದೆ. ದೇಶದ ಅಭಿವೃದ್ದಿ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಕಾಳಜಿ ಇಲ್ಲ. ದೇಶದಲ್ಲಿ ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಮುಳುಗಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಇಚ್ಛಾಶಕ್ತಿ ಇಲ್ಲ. ತನಗೆ ಅಧಿಕಾರ ನೀಡಿದ ಪ್ರಜೆಗಳ ಕಿಂಚಿತ್ತು ಗೌರವ ಕೂಡ ಇಲ್ಲ. ದೇಶದಲ್ಲಿ ಕೋಟ್ಯಂತರ ಯುವಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಯುವಕರಿಗೆ ಅವಕಾಶ ಕಲ್ಪಿಸುವ ಕಾರ್ಯ ಕಾಂಗ್ರೆಸ್ ಮಾಡಿಲ್ಲ'.
'ಕೋಟ್ಯಂತರ ಯುವಜನತೆಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಅವಕಾಶ ಬೇಕಿದ್ದು, ಇಂತಹ ಯುವಕರಿಗೆ ರೋಜ್ಗಾರ್ ಯೋಜನೆಯ ಮೂಲಕವಾಗಿ ಅವಕಾಶ ಕಲ್ಪಿಸಬೇಕಿದೆ ಎಂದು ನರೇಂದ್ರ ಮೋದಿ ಹೇಳಿದರು.
ಬಿಜಾಪುರದಲ್ಲಿ ಆಯೋಜನೆಯಾಗಿದ್ದ ಈ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 3 ಗಂಟೆಗೆ ಆಗಮಿಸಬೇಕಿತ್ತು. ಆದರೆ ನರೇಂದ್ರ ಮೋದಿ ಅವರು ಸುಮಾರು ಒಂದೂವರೆ ಗಂಟೆಗಳ ತಡವಾಗಿ ಆಗಮಿಸಿದರು. ಕೊನೆಗೆ ಕಾರ್ಯಕ್ರಮವನ್ನು ಸಂಜೆ 4.30ಕ್ಕೆ ಆರಂಭಿಸಲಾಯಿತು.