ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

1 ಗುಂಡಿಗೆ 6 ಉಗ್ರರ ಕೊಂದ ಯೋಧ

ಬ್ರಿಟೀಷ್ ಯೋಧನೊಬ್ಬ ಒಂದೇ ಗುಂಡಿಗೆ 6 ತಾಲಿಬಾನಿ ಉಗ್ರರನ್ನು ಕೊಂದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ
Srinivasa Murthy VN
Updated On : 1 Apr 2014, 6:14 am

ಲಂಡನ್: ಬ್ರಿಟೀಷ್ ಯೋಧನೊಬ್ಬ ಒಂದೇ ಗುಂಡಿಗೆ 6 ತಾಲಿಬಾನಿ ಉಗ್ರರನ್ನು ಕೊಂದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.

ಆಫ್ಗಾನಿಸ್ತಾನದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಅಂತಾರಾಷ್ಟ್ರೀಯ ಶಾಂತಿಪಾಲನಾ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬ್ರಿಟನ್ ಮೂಲದ 20 ವರ್ಷ ಲೆ.ರಿಚರ್ಡ್ ಸ್ಲಾಕ್ ಕೇವಲ 1 ಗುಂಡಿಗೆ 6 ತಾಲಿಬಾನಿ ಉಗ್ರರನ್ನು ಕೊಂದುಹಾಕಿದ್ದಾನೆ. ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಈ ಘಟನೆ ಖಾಸಗಿ ದಿನಪತ್ರಿಕೆಯ ವಿಶೇಷ ಸಂದರ್ಶನದಲ್ಲಿ ತಡವಾಗಿ ಬಹಿರಂಗಗೊಂಡಿದೆ.

ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ರಿಚರ್ಡ್ ಸ್ಲಾಕ್ ತನ್ನ ಅಪರೂಪದ ಸಾಧನೆಯನ್ನು ವಿವರಿಸಿದ್ದು, ಆ ರೋಚಕ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಈಶಾನ್ಯ ಆಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿರುವ ತಾಲಿಬಾನಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ರಿಚರ್ಡ್ ಸ್ಲಾಕ್ ಕಾಕರಣ್ ಶಿಬಿರದಲ್ಲಿ ಕಾವಲು ಕಾಯುತ್ತಿದ್ದನು. ಈ ವೇಳೆ ದೂರದಲ್ಲಿ ಅಂದರೆ ಸುಮಾರು 850 ಮೀಟರ್ ದೂರದಲ್ಲಿ ಉಗ್ರರ ಗುಂಪೊಂದು ನಡೆದು ಹೊಗುತ್ತಿರುವಂತೆ ಭಾಸವಾಗಿ, ಆತ ಕೂಡಲೇ ತನ್ನ ಸ್ನೇಪರ್(ದೂರದಲ್ಲಿರುವ ಗುರಿಯನ್ನು ಭೇದಿಸುವ ಬಂದೂಕು) ಬಂದೂಕನ್ನು ಅವರ ಮೇಲೆ ಗುರಿ ಇಡುತ್ತಾನೆ.

ಆಗ ತಾಲಿಬಾನ್ ಆತ್ಮಹತ್ಯಾ ದಳದ ಸುಮಾರು 6 ಮಂದಿ ಉಗ್ರರ ಗುಂಪು ಮರದ ನೆರಳಲ್ಲೇ ನಡೆದು ಹೋಗುತ್ತಿರುವುದು ಕಂಡುಬರುತ್ತದೆ. ಆಗ ಆತ ಕೂಡಲೇ ತನ್ನ ಮೇಲಧಿಕಾರಿಗಳಿಗೆ ಸುದ್ದಿ ಮುಟ್ಟಿಸುತ್ತಾನೆ. ಅಧಿಕಾರಿಗಳಿಂದ ಉಗ್ರರನ್ನು ಕೊಂದು ಹಾಕುವ ಸೂಚನೆ ಸಿಗುತ್ತಿದ್ದಂತೇ ಆತ ತನ್ನ ಗುರಿಯನ್ನು ಮತ್ತಷ್ಟು ನಿಖರ ಮಾಡಿಕೊಂಡು ಓರ್ವ ಉಗ್ರನತ್ತ ಗುಂಡು ಹಾರಿಸುತ್ತಾನೆ. ಗುಂಡು ಉಗ್ರನತ್ತ ಪಯಣಿಸುತ್ತಿರುವ ಹೊತ್ತಿಗೇ ಎಲ್ಲಾ ಆರು ಮಂದಿ ಉಗ್ರರು ಪರಸ್ಪರ ಮಾತನಾಡುತ್ತಾ ಒಂದೇ ಸಾಲಲ್ಲಿ ನಡೆಯುತ್ತಿರುತ್ತಿರುತ್ತಾರೆ.

ಗುಂಡು ಮೊದಲ ಉಗ್ರನ ತಲೆಯನ್ನು ಹೊಕ್ಕು ಮುಂದೆ ಚಲಿಸಿ ಎಲ್ಲ ಆರು ಮಂದಿ ಉಗ್ರರಿಗೆ ತಗುಲುತ್ತದೆ. ಇದರಿಂದಾಗಿ ಗುಂಪಿನಲ್ಲಿದ್ದ ಎಲ್ಲ ಆರು ಮಂದಿ ಉಗ್ರರು ಸಾವನ್ನಪ್ಪುತ್ತಾರೆ. ನಂತರ ಮೇಲಧಿಕಾರಿಗಳಿಗೆ ಸುದ್ದಿ ತಿಳಿದು ಸ್ಥಳವನ್ನು ಪರಿಶೀಲಿಸಿದಾಗ ಅಲ್ಲಿ ಸುಮಾರು 20 ಕೆಜಿಯಷ್ಟು ಸ್ಪೋಟಕಗಳು ಮತ್ತು ಎಕೆ 47 ಬಂದೂಕುಗಳು ದೊರೆಯುತ್ತವೆ. ನಂತರ ಅಧಿಕಾರಿಗಳು ರಿಚರ್ಡ್ ಸ್ಲಾಕ್‌ನನ್ನು ಅಭಿನಂದಿಸುತ್ತಾರೆ.

ಸ್ನೈಪರ್ ಬಂದೂಕು ಮತ್ತು ಮೊದಲ ಉಗ್ರನ ಅಂತರ 850 ಮೀಟರ್ ಗಳಾದರೆ, ಗುಂಡು ತಗುಲಿ ಸಾವಿಗೀಡಾದ ಕೊನೆಯ ಉಗ್ರ ಮತ್ತು ಸ್ನೈಪರ್ ಬಂದೂಕಿಗಿರುವ ಅಂತರ ಸುಮಾರು 1.340 ಮೀಟರ್ ಎಂದು ಅಂದಾಜಿಸಲಾಗಿದೆ. ಅಂದರೆ ಯೋಧ ಗುರಿಯಾಗಿಸಿಕೊಂಡ ಮೊದಲ ಉಗ್ರನಿಗೆ ತಗುಲಿದ ಗುಂಡು ನಂತರ ಸುಮಾರು 490 ಮೀಟರ್ ಗಳಷ್ಟು ದೂರ ಕ್ರಮಿಸಿ ಐದು ಉಗ್ರರ ದೇಹವನ್ನು ಛೇದಿಸಿದೆ.

ಒಂದೇ ಗುಂಡಿಗೆ ಆರು ಮಂದಿ ಉಗ್ರರು ಹತರಾಗುತ್ತಾರೆಂದು ಸ್ವತಃ ಗುಂಡು ಹಾರಿಸಿದ ರಿಚರ್ಡ್ ಸ್ಲಾಕ್ ಕೂಡ ಭಾವಿಸಿರಲಿಲ್ಲ ಎಂದೆನಿಸುತ್ತದೆ. ಒಟ್ಟಾರೆ ಬ್ರಿಟನ್ ಯೋಧನ ಆಕಸ್ಮಿಕ ಮತ್ತು ಅಪರೂಪದ ಸಾಧನೆ ಶ್ಲಾಘನಾರ್ಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement