ಬಿಜೆಪಿಯೊಂದಿಗೆ ಮೈತ್ರಿಯಾಗದಿದ್ದರೆ ಗಂಡನಿಗೆ ಡಿವೋರ್ಸ್..?
ಬಿಹಾರದ ಎಲ್ಜೆಪಿ ಪಕ್ಷದ ಮಹಿಳಾ ಅಭ್ಯರ್ಥಿಯೊಬ್ಬರು ತಮ್ಮ ಪಕ್ಷ..
ಪಾಟ್ನಾ: ಬಿಹಾರದ ಎಲ್ಜೆಪಿ ಪಕ್ಷದ ಮಹಿಳಾ ಅಭ್ಯರ್ಥಿಯೊಬ್ಬರು ತಮ್ಮ ಪಕ್ಷ ಬಿಜೆಪಿಯೊಂದಿಗೆ ಮೈತ್ರಿಯಾಗದಿದ್ದರೆ ತಮ್ಮ ಗಂಡನಿಗ ವಿಚ್ಛೇದನ ನೀಡಲು ಸಿದ್ಧರಾಗಿದ್ದರಂತೆ.
ಬಿಹಾರದ ಸ್ಥಳೀಯ ಪ್ರಬಲ ಪಕ್ಷಗಳಲ್ಲೊಂದಾದ ಲೋಕ ಜನಶಕ್ತಿ ಪಕ್ಷದ ಮುಂಗರ್ ಕ್ಷೇತ್ರದ ಅಭ್ಯರ್ಥಿ ವೀಣಾ ದೇವಿ ಅವರು ಬಿಜೆಪಿ ಪಕ್ಷದೊಂದಿಗೆ ಮೈತ್ರಿಯಾಗದಿದ್ದರೆ ತಮ್ಮ ಪತಿಗೆ ವಿಚ್ಛೇದನ ನೀಡುವ ಬೆದರಿಕೆ ಒಡ್ಡಿದ್ದರಂತೆ. ಈ ವಿಚಾರವನ್ನು ಸ್ವತಃ ವಿಣಾ ದೇವಿ ಅವರೇ ಬಹಿರಂಗ ಪಡಿಸಿದ್ದು, ಮುಂಗರ್ ಕ್ಷೇತ್ರದಲ್ಲಿ ಇಂದು ಪ್ರಚಾರ ನಡೆಸುತ್ತಿದ್ದ ಅವರು ಈ ವಿಚಾರವನ್ನು ತಮ್ಮ ಕಾರ್ಯಕರ್ತರೊಂದಿಗೆ ಹೇಳಿಕೊಂಡಿದ್ದಾರೆ.
ವೀಣಾ ದೇವಿ ಎಲ್ಜೆಪಿ ಪಕ್ಷದ ಮುಖಂಡ ಸೂರಜ್ ಬಾನ್ ಸಿಂಗ್ ಅವರ ಪತ್ನಿಯಾಗಿದ್ದು, ಬಿಜೆಪಿಯೊಂದಿಗೆ ಎಲ್ಜೆಪಿ ಮೈತ್ರಿ ಮಾಡುವಂತೆ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವನ್ ಅವರನ್ನು ಮನವೊಲಿಸುವಂತೆ ವೀಣಾ ಒತ್ತಡ ಹಾಕಿದ್ದರು.
'ದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಇದ್ದು, ಅವರು ಒಳ್ಳೆ ಕೆಲಸ ಮಾಡುವ ವಿಶ್ವಾಸವಿದೆ. ಹೀಗಾಗಿ ಬಿಜೆಪಿಯೊಂದಿಗೆ ಎಲ್ಜೆಪಿ ಪಕ್ಷ ಮೈತ್ರಿ ಮಾಡಿಕೊಳ್ಳಲೇ ಬೇಕು ಎಂದು ನಾನು ನನ್ನ ಪತಿಗೆ ಹೇಳಿದ್ದೆ. ಅಲ್ಲದೆ ಒಂದು ವೇಳೆ ಮೈತ್ರಿ ಸಾಧ್ಯವಾಗಿರದೇ ಹೋಗಿದ್ದರೆ ಖಂಡಿತವಾಗಿಯೂ ನಾನು ಪತಿಗೆ ವಿಚ್ಛೇಧನ ನೀಡಿ ಕೇಸರಿ ಪಕ್ಷವನ್ನು ಸೇರುತ್ತಿದ್ದೆ ಎಂದು ವೀಣಾ ಹೇಳಿದ್ದಾರೆ. ಲೋಕಸಭಾ ಅಭ್ಯರ್ಥಿ ವೀಣಾ ದೇವಿ ಅವರ ಮಾತುಗಳನ್ನು ಕೇಳಿ ಅಲ್ಲಿ ನೆರೆದಿದ್ದ ಜನರೆಲ್ಲಾ ಒಂದು ಕ್ಷಣ ನಗೆಗಡಲಲ್ಲಿ ತೇಲಿದರಂತೆ.
ಒಟ್ಟಾರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆ ಕೇವಲ ರಾಜಕೀಯ ಪಕ್ಷಗಳಲ್ಲಷ್ಟೇ ಅಲ್ಲದೇ ದಂಪತಿಗಳ ಸಂಸಾರದ ಮೇಲೂ ಪ್ರಭಾವ ಬೀರುತ್ತಿರುವುದು ವಿಶೇಷವೇ ಸರಿ.