ಹಿಟ್ ಅಂಡ್ ರನ್: ಮರು ವಿಚಾರಣೆ ಮತ್ತೆ ವಿಳಂಬ
ನಟ ಸಲ್ಮಾನ್ ಖಾನ್ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣದ ಮರು ವಿಚಾರಣೆ ಮತ್ತೆ ವಿಳಂಬವಾಗಿದ್ದು, ಸಾಕ್ಷ್ಯಾಧಾರಗಳನ್ನು ಪ್ರವೇಶ ಪಡಿಸಲು ಕಾಲಾವಕಾಶ ಬೇಕೆಂದು ಸರ್ಕಾರಿ ಪರ ವಕೀಲರು ಹೇಳಿದ್ದಾರೆ.
ಮುಂಬೈ: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣದ ಮರು ವಿಚಾರಣೆ ಮತ್ತೆ ವಿಳಂಬವಾಗಿದ್ದು, ಸಾಕ್ಷ್ಯಾಧಾರಗಳನ್ನು ಪ್ರವೇಶ ಪಡಿಸಲು ಮತ್ತಷ್ಟು ಕಾಲಾವಕಾಶ ಬೇಕೆಂದು ಸರ್ಕಾರಿ ಪರ ವಕೀಲರು ಹೇಳಿದ್ದಾರೆ.
2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷ್ಯಾಧಾರ ಗಳ ಅನುಪಸ್ಥಿತಿಯಲ್ಲಿ ವಿಚಾರಣೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ ಲೋಕಸಭಾ ಚುನಾವಣೆ ಸನ್ನಿಹಿತವಾಗುತ್ತಿರುವುದರಿಂದ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಿತು. ಇಂದು ನಡೆದ ಕಲಾಪದಲ್ಲಿ ನ್ಯಾಯಾಲಯ ಘಟನೆಯಲ್ಲಿ ಗಾಯಗೊಂಡಿದ್ದ ನಾಲ್ಕು ಗಾಯಾಳುಗಳನ್ನು ವಿಚಾರಣೆ ನಡೆಸಿತು. ಆದರೆ ಪ್ರಕರಣ ಸಂಬಂಧ ಮತ್ತಷ್ಟು ಸಾಕ್ಷಿಗಳ ಅವಶ್ಯಕತೆ ಇರುವುದರಿಂದ ವಿಚಾರಣೆಯನ್ನು ಮುಂದೂಡಿತು.
ಕಲಾಪದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸರ್ಕಾರಿ ಪರ ವಕೀಲ ಜಗನ್ನಾಥ್ ಕೆಂಜಾಲ್ಕರ್ ಅವರು, ಪ್ರಕರಣ ಸಂಬಂಧ ಮರು ವಿಚಾರಣೆ ನಡೆಯುತ್ತಿದೆ. ಹೀಗಾಗಿ ಪ್ರಕರಣದ ಆರೋಪಿ ನಟ ಸಲ್ಮಾನ್ ಖಾನ್ ಅವರ ಉಪಸ್ಥಿತಿ ಅವಶ್ಯಕ. ಅಂತೆಯೇ ಸಾಕ್ಷ್ಯಾಧಾರಗಳ ಪ್ರವೇಶಕ್ಕೆ ಮತ್ತಷ್ಟು ಕಾಲಾವಕಾಶ ಬೇಕಿದೆ ಎಂದು ಹೇಳಿದರು.
2002ರ ಸೆಪ್ಟೆಂಬರ್ 28ರಂದು ಮುಂಬೈನಲ್ಲಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಸಲ್ಮಾನ್ ಖಾನ್ ಕಾರನ್ನು ಫುಟ್ಪಾತ್ ಮೇಲೆ ವೇಗವಾಗಿ ಚಲಾಯಿಸಿದ್ದರು. ಈ ವೇಳೆ ಫುಟ್ಪಾತ್ನಲ್ಲಿದ್ದ ಓರ್ವ ಪಾದಚಾರಿ ಸಾವಿಗೀಡಾಗಿ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ನಟ ಸಲ್ಮಾನ್ ಖಾನ್ ವಿರುದ್ಧ ಐಪಿಸಿ ಸೆಕ್ಷನ್ 304 (ಕೊಲೆ), 304 (2)(ಕೊಲೆ ಪ್ರಮಾಣದ) ನಿರ್ಲಕ್ಷ್ಯ ಚಾಲನೆ, ಮದ್ಯಪಾನ ಮಾಡಿ ಚಾಲನೆ ಪ್ರಕರಣದ ಅಡಿಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ಮುಂಬೈ ಸೆಷನ್ಸ್ ನ್ಯಾಯಾಲಯ ಸಲ್ಮಾನ್ ಖಾನ್ ವಿರುದ್ಧ ಕೊಲೆ ಪ್ರಮಾಣದ ಪ್ರಕರಣವನ್ನು ದಾಖಲಿಸಬಾರದೇಕೆ ಎಂದು ಪ್ರಶ್ನಿಸಿತ್ತು. ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದ ಸಲ್ಮಾನ್ ಖಾನ್ ಅವರು ತಮ್ಮ ವಿರುದ್ಧದ ಪ್ರಕರಣವನ್ನು ಕೊಲೆ ಪ್ರಕರಣದಂತೆ ವಿಚಾರಣೆ ಮಾಡಬಾರದು, ಬದಲಿಗೆ ನಿರ್ಲಕ್ಷ್ಯ ಚಾಲನೆ ಪ್ರಕರಣದಡಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು.