ಶಿಕಾಗೋ ಬೂತ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ
ಶಿಕಾಗೋ ಬೂತ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ..
ನವದೆಹಲಿ: ಶಿಕಾಗೋ ಬೂತ್ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದು ಯೂನಿವರ್ಸಿಟಿ ಆಫ್ ಶಿಕಾಗೋ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆ ಹೇಳಿದೆ.
ಶಿಕಾಗೋ ಬೂತ್ನಲ್ಲಿ ವಿದ್ಯಾಭ್ಯಾಸಕ್ಕಾಗಿ ದಾಖಲಾಗುವ ಭಾರತೀಯ ವಿದ್ಯಾರ್ಥಿಗಳ ಪೈಕಿ ಮೂವರು ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದು ಯೂನಿವರ್ಸಿಟಿ ಆಫ್ ಶಿಕಾಗೋ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆ ತಿಳಿಸಿದೆ. ಒಂದು ವರ್ಷದ ಅವಧಿಯ ಕೋರ್ಸಿಗೆ 25,000 ಡಾಲರ್ ಮತ್ತು 2 ವರ್ಷದ ಅವಧಿಯ ಕೋರ್ಸಿಗೆ 50,000 ಡಾಲರ್ ನೆರವು ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.
ಯೂನಿವರ್ಸಿಟಿ ಆಫ್ ಶಿಕಾಗೋ ಸ್ಕೂಲ್ ಆಫ್ ಬ್ಯುಸಿನೆಸ್ ಸಂಸ್ಥೆಯನ್ನು ಗುರು ರಾಮಕೃಷ್ಣನ್ ಅವರು ಸ್ಥಾಪಿಸಿದ್ದು, ಭಾರತೀಯ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ನಾನು ಕಲಿತ ಶಿಕಾಗೋ ಬೂತ್ ಸಂಸ್ಥೆಯನ್ನು ಬೆಂಬಲಿಸುವುದು ನನಗೆ ದೊರೆತ ಅದೃಷ್ಟವಾಗಿದ್ದು, ನನ್ನ ಸಂಸ್ಥೆಗೆ ಏನಾದರೂ ಮಾಡಬೇಕೆಂಬ ನನ್ನ ಆಸೆ ಈ ಮೂಲಕ ಈಡೇರುತ್ತಿದೆ. ಅದರಲ್ಲಿಯೂ ಭಾರತೀಯ ಮೂಲದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕಾರ್ಯ ನನಗೆ ತುಂಬಾ ಖುಷಿ ನೀಡಿದೆ ಎಂದು ಹೇಳಿದ್ದಾರೆ.
ಶಿಕಾಗೋ ಬೂತ್ ಸಂಸ್ಥೆಯಲ್ಲಿ ಅಮೆರಿಕನ್ನರನ್ನು ಹೊರತು ಪಡಿಸಿದರೆ ಭಾರತೀಯ ಮೂಲದ ವಿದ್ಯಾರ್ಥಿಗಳೇ ಹೆಚ್ಚಾಗಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.