'ರಾಮಲೀಲಾ' ವಿರುದ್ಧ ಅರೆಸ್ಟ್ ವಾರೆಂಟ್
ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿದ್ದ ಬಾಲಿವುಡ್ ಚಿತ್ರ 'ರಾಮಲೀಲಾ' ಚಿತ್ರತಂಡದ ವಿರುದ್ಧ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ಪಾಟ್ನಾ: ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿದ್ದ ಬಾಲಿವುಡ್ ಚಿತ್ರ 'ರಾಮಲೀಲಾ' ಚಿತ್ರತಂಡದ ವಿರುದ್ಧ ನ್ಯಾಯಾಲಯ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.
ರಾಮಲೀಲಾ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಾಯಕ ನಟ ರಣ್ವೀರ್ ಸಿಂಗ್, ನಾಯಕ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ.
ಚಿತ್ರವು ಈಗಾಗಲೇ ತೆರೆಕಂಡು ಯಶಸ್ವಿಯಾಗಿದ್ದು, 100 ಕೋಟಿ ಗಳಿಸಿದ ಬಾಲಿವುಡ್ ಚಿತ್ರಗಳ ಪಟ್ಟಿಯಲ್ಲಿ ಸ್ಥಾನಗಳಿಸಿದೆ. ಆದರೆ ಇದೀಗ ಚಿತ್ರದ ಕುರಿತು ವಿವಾದ ಭುಗಿಲೆದ್ದಿದೆ. ಚಿತ್ರದ ಕೆಲವು ದೃಶ್ಯಗಳಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದಾದ ಸನ್ನಿವೇಶಗಳಿವೆ ಎಂದು ಆರೋಪಿಸಿ ವಕೀಲ ಸುಧೀರ್ ಕುಮಾರ್ ಓಜಾ ಅವರು ಕಳೆದ ನವೆಂಬರ್ನಲ್ಲಿ ದೂರು ಸಲ್ಲಿಸಿದ್ದರು.
ಅಂದು ವಿಚಾರಣೆ ನಡೆಸಿದ್ದ ಮಧ್ಯಪ್ರದೇಶ ನ್ಯಾಯಾಲಯ ಚಿತ್ರವನ್ನು ನವೆಂಬರ್ 22ರವರೆವಿಗೂ ಬಿಡುಗಡೆ ಮಾಡಬಾರದು ಎಂದು ಆದೇಶಿಸಿತ್ತು. ಆದರೆ ಚಿತ್ರತಂಡ ನವೆಂಬರ್ 12ರಂದೇ ದೇಶಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಿತ್ತು. ಚಿತ್ರ ಬಿಡುಗಡೆಗೆ ಸಂಬಂಧಿಸಿದಂತೆ ಕಳೆದ ಫೆಬ್ರವರಿ 14ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಟರಾದ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ, ಚಿತ್ರದ ಸಂಗೀತ ನಿರ್ದೇಶಕ, ಸಾಹಿತಿಗಳು ಸೇರಿದಂತೆ ಚಿತ್ರತಂಡದ ಪ್ರಮುಖರಿಗೆ ವಾರೆಂಟ್ ಜಾರಿ ಮಾಡಿತ್ತು.
ಆದರೆ ಇಂದು ನ್ಯಾಯಾಲಯದ ಆದೇಶವಿದ್ದರೂ ಚಿತ್ರವನ್ನು ಬಿಡುಗಡೆಗೊಳಿಸಿರುವುದನ್ನು ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ವಿಚಾರಣೆಗೆ ತೆಗೆದುಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎಸ್.ಪಿ.ಸಿಂಗ್ ಅವರು ಚಿತ್ರ ತಂಡವನ್ನು ಬಂಧಿಸುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಅವರನ್ನು ಜೂನ್ 4ರೊಳಗೆ ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ.